ವೈದ್ಯಕೀಯ ಕಾಲೇಜಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಭೇಟಿ: ಮೂಲ ಸೌಕರ್ಯ ಪರಿಶೀಲನೆ
ಚಾಮರಾಜನಗರ

ವೈದ್ಯಕೀಯ ಕಾಲೇಜಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರ ಭೇಟಿ: ಮೂಲ ಸೌಕರ್ಯ ಪರಿಶೀಲನೆ

July 31, 2018

ಚಾಮರಾಜನಗರ: ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ನಗರದ ಹೊರವಲಯದಲ್ಲಿರುವ ಚಾಮರಾಜನಗರ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು.

ಮೊದಲಿಗೆ ಕಾಲೇಜು ಕಟ್ಟಡಕ್ಕೆ ಭೇಟಿ ನೀಡಿದ ಸಚಿವರು ಬೋಧಕ ವರ್ಗದಿಂದ ಕಾಲೇಜು ವಿಷಯಗಳಿಗೆ ಸಂಬಂಧಿಸಿದಂತೆ ಮಾಹಿತಿ ಪಡೆದರು. ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಬಳಿಕ ಪುರುಷ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳ ಕೊಠಡಿಗಳನ್ನು ಖುದ್ದು ವೀಕ್ಷಿಸಿದರು. ಕೊಠಡಿಗಳಲ್ಲಿ ಸರಿಯಾದ ವ್ಯವಸ್ಥೆ ಇದೆಯೇ? ಊಟ ಉಪಹಾರದ ಗುಣಮಟ್ಟ ಚೆನ್ನಾಗಿದೆಯೇ? ಉತ್ತಮ ಸಾಮಾಗ್ರಿಗಳನ್ನು ಬಳಕೆ ಮಾಡಲಾಗುತ್ತಿದೆಯೇ? ಎಂದು ಪ್ರಶ್ನಿಸಿದರು.

ಅಡುಗೆ ತಯಾರಿಸುವ ಕೋಣೆ, ಅಡುಗೆ ಸಾಮಗ್ರಿಗಳನ್ನು ದಾಸ್ತಾನು ಮಾಡಿರುವ ಕೊಠಡಿ, ಊಟದ ಹಾಲ್‍ಗಳನ್ನು ಸಚಿವರು ಪರಿಶೀಲಿಸಿದರು. ಕುಡಿಯುವ ನೀರು ಪೂರೈಸಲು ಅಳವಡಿಸಿರುವ ವ್ಯವಸ್ಥೆಯನ್ನು ವೀಕ್ಷಿಸಿ ಶುದ್ಧ ಸರಬರಾಜಿಗೆ ಕ್ರಮ ಹೇಗೆ ವಹಿಸಲಾಗಿದೆ ಎಂಬುದರ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿಗಳಿಗೆ ಸಿದ್ಧಪಡಿಸಲಾಗುತ್ತಿದ್ದ ಆಹಾರವನ್ನು ಸಹ ವೀಕ್ಷಿಸಿದರು.

ವಿದ್ಯಾರ್ಥಿನಿಯರ ಹಾಸ್ಟಲ್‍ಗೂ ಭೇಟಿ ನೀಡಿ, ಊಟ ಶುಚಿತ್ವ, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯಗಳು ಸರಿಯಾಗಿ ಇದೆಯೇ? ಎಂದು ಕೇಳಿ ತಿಳಿದುಕೊಂಡರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಪದೇಪದೇ ವಿದ್ಯುತ್ ಸಂಪರ್ಕ ಕಡಿತವಾಗುತ್ತದೆ. ಜನರೇಟರ್ ವ್ಯವಸ್ಥೆ ಸಮರ್ಪಕವಾಗಿ ಒದಗಿಸಬೇಕು. ವಾರಾಂತ್ಯ ರಜೆಯಲ್ಲಿ ಪಟ್ಟಣಕ್ಕೆ ಹೋಗಿ ಬರಲು ಬಸ್ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.

ಸ್ಥಳದಲ್ಲಿಯೇ ಇದ್ದ ಅಧಿಕಾರಿಗಳಿಗೆ ಜನರೇಟರ್ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಬೇಕು. ಕಾಲೇಜು ಆವರಣದ ಬಳಿ ಘನತ್ಯಾಜ್ಯ ಸುರಿಯುವುದನ್ನು ನಿಲ್ಲಿಸಬೇಕು ಎಂದು ಸೂಚಿಸಿದರು. ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ದೂರವಾಣಿ ಮುಖಾಂತರ ಸಂಪರ್ಕಿಸಿ ವಾರದಲ್ಲಿ ರಜೆ ದಿನಗಳಂದು ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ನಿರ್ದೇಶನ ನೀಡಿದರು.

ಬಳಿಕ ಮಾತನಾಡಿದ ಸಚಿವರು, ಹಾಸ್ಟೆಲ್‍ನಲ್ಲಿ ಕೆಲ ವ್ಯವಸ್ಥೆಗಳು ಸರಿಯಿಲ್ಲವೆಂಬ ಮಾಹಿತಿ ಹಿನ್ನೆಲೆಯಲ್ಲಿ ಭೇಟಿ ನೀಡಲಾಗಿದೆ. ಆದರೆ, ವಿದ್ಯಾರ್ಥಿಗಳು ಊಟ, ಉಪಹಾರ ವ್ಯವಸ್ಥೆ ಬಗ್ಗೆ ಯಾವುದೇ ದೂರು ನೀಡಿಲ್ಲ. ಬಸ್, ವಿದ್ಯುತ್ ಸಮಸ್ಯೆಗಳನ್ನು ಮುಂದಿಟ್ಟಿದ್ದಾರೆ. ಈ ಎಲ್ಲಾ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಕಾಲೇಜು ಆವರಣ ಕಾಂಪೌಂಡ್‍ಗೆ 4.25ಕೋಟಿರೂ. ರಸ್ತೆ ನಿರ್ಮಾಣಕ್ಕೆ 5.75ಕೋಟಿರೂ. ಅನುದಾನ ನಿಗದಿಯಾಗಿದ್ದು ಕಾಮಗಾರಿ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಆದಷ್ಟು ಶೀಘ್ರವೇ ಕಾಮಗಾರಿ ಆರಂಭವಾಗಲಿದ್ದು, ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ನಗರಸಭೆ ಉಪಾಧ್ಯಕ್ಷ ಆರ್.ಎಂ.ರಾಜಪ್ಪ, ಸದಸ್ಯರಾದ ಚೆಂಗುಮಣಿ, ವೈದ್ಯಕೀಯ ಕಾಲೇಜು ಡೀನ್ ಡಾ.ಡಿ.ಹೆಚ್.ರಾಜೇಂದ್ರ, ಜಿಲ್ಲಾ ಸರ್ಜನ್ ಡಾ.ರಘುರಾಮ್, ಡಾ.ಮಹೇಶ್ ಇತರೆ ಅಧಿಕಾರಿಗಳು ಹಾಜರಿದ್ದರು.

Translate »