ಚೆನ್ನಿಪುರದಮೋಳೆ ಶಾಲೆಯಲ್ಲಿ ಮರಗಿಡಗಳ ಹುಟ್ಟುಹಬ್ಬ ಆಚರಣೆ
ಚಾಮರಾಜನಗರ

ಚೆನ್ನಿಪುರದಮೋಳೆ ಶಾಲೆಯಲ್ಲಿ ಮರಗಿಡಗಳ ಹುಟ್ಟುಹಬ್ಬ ಆಚರಣೆ

July 31, 2018

ಚಾಮರಾಜನಗರ:  ಸಮೀಪದ ಚೆನ್ನಿಪುರದ ಮೋಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾವರಣದಲ್ಲಿ 2ನೇ ವರ್ಷದ ಗಿಡ ಮರಗಳ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಗಿಡಗಳ ಹುಟ್ಟುಹಬ್ಬದ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಶಾಲೆಯನ್ನು ಶುಚಿಗೊಳಿಸಿ ಗಿಡಮರಗಳಿಗೆ ದೀಪಾಲಂಕಾರ ಹೂವಿನ ಆಲಂಕಾರ ಮಾಡಿದ್ದು ನೋಡುಗರ ಕಣ್ಮನ ಸೆಳೆಯುತ್ತಿತ್ತು. ಮಕ್ಕಳೊಂದಿಗೆ ಶಿಕ್ಷಕರು ಹಾಗೂ ಗಣ್ಯರು ಕೇಕ್ ಕತ್ತರಿಸಿ ಸಂಭ್ರಮಿಸಿದರು.

ಪತ್ರಕರ್ತ ಎಸ್.ಎಂ.ನಂದೀಶ್ ಮಾತನಾಡಿ, ಇಂದಿನ ದಿನಗಳಲ್ಲಿ ಸಿನಿಮಾ ನಟರು ಹಾಗೂ ವೈಯಕ್ತಿಕವಾಗಿ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸುವುದು ವಾಡಿಕೆಯಾಗಿದೆ. ನಮಗೆ ಉಸಿರಾಡಲು ಶುದ್ಧ ಗಾಳಿ ನೀಡುವ ಹಾಗೂ ಕೋಟ್ಯಾಂತರ ಜೀವಿಗಳ ಉಳಿವಿಗೆ ಕಾರಣವಾದ ಮರಗಿಡಗಳನ್ನು ಬೆಳೆಸಿ ಹುಟ್ಟುಹಬ್ಬ ಆಚರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಿಕ್ಷಕರು ಹಾಗೂ ಎಸ್‍ಡಿಎಂಸಿ ಅವರ ಸಹಕಾರದಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ 2ನೇ ಬಾರಿ ಮರಗಿಡಗಳ ಹುಟ್ಟುಹಬ್ಬ ಆಚರಿಸಿ ಇತರರಿಗೆ ಮಾದರಿಯಾಗಿದ್ದಾರೆ. ಈ ಮೂಲಕ ಪರಿಸರದ ಮೇಲೆ ಇರುವ ಕಾಳಜಿಯನ್ನು ಪ್ರಾಯೋಗಿಕವಾಗಿ ಕೆಲಸ ಮಾಡಿ ತೋರಿಸಿದ್ದಾರೆ ಎಂದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮಹಾಲಿಂಗಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಶಾಲೆಯಲ್ಲಿ ಗಿಡ ಮರಗಳನ್ನು ಪೋಷಿಸುವಂತೆ ತಮ್ಮ ಮನೆಯ ಸುತ್ತಲ ಪ್ರದೇಶದಲ್ಲಿ ಗಿಡಗಳನ್ನು ಬೆಳೆಯಿಸಬೇಕು. ಎಲ್ಲರು ಪರಿಸರದ ಕಾಳಜಿಯನ್ನು ಮೂಡಿಸಬೇಕು ಎಂದು ತಿಳಿಸಿದರು.

ಈ ವೇಳೆ ಪರಿಸರವಾದಿ ವೆಂಕಟೇಶ್ ಅವರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆ ಅಧ್ಯಕ್ಷ ಟಿ.ರಂಗಸ್ವಾಮಿ, ನಗರಸಭೆ ಮಾಜಿ ಸದಸ್ಯ ಮಲ್ಲು, ಎಸ್‍ಡಿಎಂಸಿ ಅಧ್ಯಕ್ಷ ಜಯಕುಮಾರ್, ಮುಖ್ಯಶಿಕ್ಷಕಿ ಮಂಗಳಗೌರಿ, ಶಿಕ್ಷಕರಾದ ನಂಜುಡಯ್ಯ, ಕುಮಾರ್, ಅಂಜಲಿ, ಕುಸುಮಾ, ಪದ್ಮ, ಕಮಲಮ್ಮ, ಮುಖಂಡ ಕೆ.ಸಿದ್ದರಾಜು ಹಾಜರಿದ್ದರು.

Translate »