ಆ. 13ಕ್ಕೆ ಸಂಪುಟ ವಿಸ್ತರಣೆ
ಮೈಸೂರು

ಆ. 13ಕ್ಕೆ ಸಂಪುಟ ವಿಸ್ತರಣೆ

August 7, 2018
  • ಕಾಂಗ್ರೆಸ್ ವರಿಷ್ಠರ ಸಲಹೆಯಂತೆ ಸಿಎಂ ಕುಮಾರಸ್ವಾಮಿ ನಿರ್ಧಾರ
  • ಕಾಂಗ್ರೆಸ್‍ನ ಐದು, ಜೆಡಿಎಸ್‍ನ ಒಂದು ಸ್ಥಾನ ಭರ್ತಿಗೆ ತೀರ್ಮಾನ
  • ಇದೇ ವೇಳೆ 30 ನಿಗಮ-ಮಂಡಳಿಗೂ ನೇಮಕ

ಬೆಂಗಳೂರು:  ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನವೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವಿಸ್ತರಿಸಲಿದ್ದಾರೆ. ಕಾಂಗ್ರೆಸ್‍ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆ ಮೇರೆಗೆ ಆಗಸ್ಟ್ 13 ರಂದು ಮಂತ್ರಿಮಂಡಲ ವಿಸ್ತರಣೆ ಜರುಗಲಿದೆ.

ಮಂತ್ರಿಮಂಡಲ ವಿಸ್ತರಣೆಗೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ ಎಂಬ ರಾಜ್ಯ ಚುನಾವಣಾ ಆಯೋಗದ ಸಲಹೆಯಂತೆ ದಿನಾಂಕ ನಿರ್ಧಾರ ಮಾಡಿದ್ದಾರೆ. ವಿಸ್ತರಣೆ ಸಂದರ್ಭದಲ್ಲಿ ಆರು ಮಂದಿ ಹೊಸಬರಿಗೆ ಅವಕಾಶ ಮಾಡಿಕೊಡುತ್ತಿದ್ದು, ಅದರಲ್ಲಿ ಮೈತ್ರಿ ಪಕ್ಷ ಕಾಂಗ್ರೆಸ್‍ನ ಐದು, ತಮ್ಮ ಪಕ್ಷದ ಒಬ್ಬರನ್ನು ಸೇರ್ಪಡೆ ಮಾಡಿಕೊಳ್ಳಲಿದ್ದಾರೆ.

ಈ ಆರು ಸ್ಥಾನಗಳು ಭರ್ತಿಯಾದರೂ ಕಾಂಗ್ರೆಸ್ ತನ್ನ ಪಾಲಿನ ಒಂದು ಸ್ಥಾನ ಉಳಿಸಿಕೊಳ್ಳಲಿದೆ. ಆದರೆ ಜೆಡಿಎಸ್ ತನ್ನ ಪಾಲಿನ ಉಳಿದ ಒಂದು ಸ್ಥಾನ ಭರ್ತಿ ಮಾಡಿಕೊಳ್ಳುತ್ತಿದೆ.ಸಚಿವ ಆಕಾಂಕ್ಷಿಯಾಗಿ ಅವಕಾಶ ದೊರೆಯದ ಕೆಲವು ಪ್ರಮುಖರಿಗೆ ನಿಗಮ-ಮಂಡಳಿಗೆ ನೇಮಕ ಮಾಡಿ ಈ ಸ್ಥಾನಗಳನ್ನು ಸಂಪುಟ ದರ್ಜೆಗೆ ಏರಿಸಲಿದ್ದಾರೆ.

ಕಾಂಗ್ರೆಸ್ ಸಲಹೆ ಮೇರೆಗೆ ಮೊದಲ ಕಂತಿನಲ್ಲಿ ಸಂಪನ್ಮೂಲ ಭರಿತ 30 ನಿಗಮಗಳಿಗೆ ನೇಮಕ ಮಾಡುತ್ತಿದ್ದು, ಅದರಲ್ಲಿ ಮೈತ್ರಿ ಒಪ್ಪಂದದಂತೆ ಮೂರನೇ ಎರಡು ಭಾಗ ಅಂದರೆ 20 ನಿಗಮಗಳು ಕಾಂಗ್ರೆಸ್‍ಗೂ, ಉಳಿದ 10 ಜೆಡಿಎಸ್ ಸದಸ್ಯರಿಗೆ ದೊರೆಯಲಿದೆ.

ಮಂತ್ರಿಮಂಡಲ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ವಂಚಿತರು ಮತ್ತೆ ಬಂಡಾಯ ಏಳುವುದನ್ನು ತಪ್ಪಿಸಲು ಪರ್ಯಾಯ ವ್ಯವಸ್ಥೆಗೆ ಕಾಂಗ್ರೆಸ್ ಮುಂದಾಗಿದೆ. ವಿಸ್ತರಣೆ ಬೆನ್ನಲ್ಲೇ ನಿಗಮ-ಮಂಡಳಿಗಳ ನೇಮಕಾತಿಯೂ ನಡೆಯಲಿದೆ ಎಂದು ಕಾಂಗ್ರೆಸ್ ಉನ್ನತ ಮೂಲಗಳು ತಿಳಿಸಿವೆ.

ಸಂಪುಟ ವಿಸ್ತರಣೆ ಮಾಡದಿದ್ದರೆ ಕಾಂಗ್ರೆಸ್‍ನ ಕೆಲವು ಹಿರಿಯ ಸದಸ್ಯರು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಹಿಂದೆ ಸರಿದು ಪಕ್ಷಕ್ಕೆ ಹಿನ್ನಡೆ ಉಂಟು ಮಾಡಬಹುದೆಂಬ ಆತಂಕ ರಾಜ್ಯ ಮತ್ತು ರಾಷ್ಟ್ರ ನಾಯಕರಿಗಿದೆ.

ಇದರ ಮಾಹಿತಿ ಅರಿತೇ ಇತ್ತೀಚೆಗೆ ನಗರಕ್ಕೆ ಬಂದಿದ್ದ ರಾಜ್ಯ ಉಸ್ತುವಾರಿ ಹೊಣೆಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಸ್ಥಳೀಯ ನಾಯಕರೊಂದಿಗೆ ಸಮಾಲೋಚನೆ ನಡೆಸಿ ವಿಸ್ತರಣೆ ನಿರ್ಧಾರ ಕೈಗೊಂಡರು.

ಆ ಸಭೆಯಲ್ಲೇ ನಮ್ಮ ವತಿಯಿಂದ ಮಂತ್ರಿಮಂಡಲಕ್ಕೆ ಯಾರನ್ನು ಸೇರ್ಪಡೆ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆದು ಸಂಭವನೀಯರ ಪಟ್ಟಿ ಸಿದ್ಧಪಡಿಸಿದ್ದಾರೆ.

ಲಿಂಗಾಯತ ಸಮುದಾಯಕ್ಕೆ ಎರಡು, ಕುರುಬ, ಅಲ್ಪಸಂಖ್ಯಾತ, ಪರಿಶಿಷ್ಟ ಎಡಗೈ ವರ್ಗಕ್ಕೆ ತಲಾ ಒಂದು ಸ್ಥಾನ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಲಿಂಗಾಯತ ಸಮುದಾಯದ ಕೋಟಾದ ಎರಡು ಸ್ಥಾನಗಳಿಗೆ ಆರು ಪ್ರಭಾವಿ ನಾಯಕರು ಪೈಪೋಟಿ ನಡೆಸಿದ್ದಾರೆ. ಅಲ್ಪಸಂಖ್ಯಾತರ ಭಾಗದಲ್ಲಿ ಇಬ್ಬರು, ಕುರುಬ ಸಮುದಾಯದಲ್ಲಿ ಇಬ್ಬರು ಇದಲ್ಲದೆ, ಸಾಮಾನ್ಯ ಕೋಟಾದಡಿ ಸಂಪುಟ ಸೇರಲು ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಎಚ್.ಕೆ. ಪಾಟೀಲ್ ಪ್ರಯತ್ನ ನಡೆಸಿದ್ದಾರೆ.

Translate »