ನೀರು ಸಂಗ್ರಹ ಸಾಮಥ್ರ್ಯ ವೃದ್ಧಿಗೆ 527 ಕೆರೆ ಹೂಳೆತ್ತಲು ಸಿಎಂ ಕುಮಾರಸ್ವಾಮಿ ಸೂಚನೆ
ಮೈಸೂರು

ನೀರು ಸಂಗ್ರಹ ಸಾಮಥ್ರ್ಯ ವೃದ್ಧಿಗೆ 527 ಕೆರೆ ಹೂಳೆತ್ತಲು ಸಿಎಂ ಕುಮಾರಸ್ವಾಮಿ ಸೂಚನೆ

August 7, 2018

ಬೆಂಗಳೂರು:  ಎತ್ತಿನಹೊಳೆ ಯೋಜನೆಯಡಿ 5 ಜಿಲ್ಲೆಗಳ ವ್ಯಾಪ್ತಿಯಲ್ಲಿನ 527 ಕೆರೆಗಳ ನೀರು ಸಂಗ್ರಹಣಾ ಸಾಮಥ್ರ್ಯ ಹೆಚ್ಚಿಸಲು ಈ ಕೆರೆಗಳ ಹೂಳೆತ್ತಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದರು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ಇಂದು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಪಶ್ಚಿಮ ಘಟ್ಟಗಳಲ್ಲಿ ಹರಿದು ಅರಬ್ಬಿ ಸಮುದ್ರ ಸೇರುವ ಎತ್ತಿನಹೊಳೆ ಮತ್ತು ಅದರ ಉಪನದಿಗಳ ನೀರನ್ನು ಪೂರ್ವಾಭಿಮುಖವಾಗಿ ಹರಿಸಿ, ಬರ ಪೀಡಿತ ಜಿಲ್ಲೆಗಳಾದ ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕುಡಿಯುವ ನೀರು ಮತ್ತು ಅಂತರ್ಜಲ ಮರುಪೂರಣಕ್ಕಾಗಿ ಎತ್ತಿನಹೂಳೆ ಯೋಜನೆಯನ್ನು ರೂಪಿಸಲಾಗಿದೆ.

ಸಣ್ಣ ನೀರಾವರಿ ಇಲಾಖೆಯು, ಯೋಜನೆಯಡಿ ನೀರು ಪೂರೈಸಲು ಉದ್ದೇಶಿಸಿರುವ ಕೆರೆಗಳ ಪುನಶ್ಚೇತನವನ್ನು ಹಂತ ಹಂತವಾಗಿ ಯೋಜನೆಯ ಜೊತೆ ಸಮಾನಾಂತರವಾಗಿ ಕೈಗೊಳ್ಳಲು ಹಾಗೂ ಈ ನೀರನ್ನು ಬಳಸಿಕೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆಯು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗಳು ತಿಳಿಸಿದರು.

ಎತ್ತಿನ ಹೊಳೆ ಯೋಜನೆಗೆ ಮೂರು ಭೂಸ್ವಾಧೀನಾಧಿಕಾರಿಗಳ ಹುದ್ದೆಗಳು ಮಂಜೂರಾಗಿದ್ದು, ಇವರನ್ನು ತುರ್ತಾಗಿ ನೇಮಕ ಮಾಡಲು ಮುಖ್ಯಮಂತ್ರಿಗಳು ಸೂಚಿಸಿದರು.

ಯೋಜನೆಗೆ ಅವಶ್ಯವಿರುವ 21 ಹಳ್ಳಿಗಳ 5000 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಹಾಗೂ ವಶಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕಾರ್ಯಯೋಜನೆಯನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಎತ್ತಿನಹೊಳೆಯಿಂದ ತರಲಾಗುವ ನೀರನ್ನು ತುಂಬಿಕೊಳ್ಳಲು ಕೊರಟಗೆರೆ ಸಮೀಪ ಜಲಾಶಯ ನಿರ್ಮಾಣ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ಆಲಮಟ್ಟಿ ಅಣೆಕಟ್ಟೆಯ ಎತ್ತರವನ್ನು 524 ಅಡಿಗಳಿಗೆ ಎತ್ತರಿಸುವ ಸಂದರ್ಭದಲ್ಲಿ ಹಿನ್ನೀರಿನಿಂದ ಮುಳುಗಡೆಯಾಗುವ ಗ್ರಾಮಗಳ ಸ್ಥಳಾಂತರ ಹಾಗೂ ಹೊಸ ಗ್ರಾಮಗಳ ನಿರ್ಮಾಣಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ.

ಭೂಸ್ವಾಧೀನ ಸಂದರ್ಭದಲ್ಲಿ ರೈತರು ಕಳೆದುಕೊಳ್ಳುವ ಭೂಮಿಗೆ ಯಾವ ರೀತಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂಬ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ. ಆದರೆ ಪಾವಗಡ ಮಾದರಿ ಅನುಷ್ಠಾನಗೊಳಿಸುವ ಚಿಂತನೆ ನಡೆದಿದೆ.

ಹೊಸದಾಗಿ ಭೂಸ್ವಾಧೀನ ಮಾಡುವ ಜಮೀನನ್ನು ರೈತರ ಹೆಸರಿನಲ್ಲೇ ಉಳಿಸಿಕೊಂಡು, ಮಳೆಗಾಲದಲ್ಲಿ ಮೂರು ತಿಂಗಳು ಈ ಭೂಮಿಯಲ್ಲಿ ಹಿನ್ನೀರು ತುಂಬಿರುತ್ತದೆ, ನೀರು ಖಾಲಿಯಾದ ನಂತರ ರೈತರಿಗೆ ಎಂದಿನಂತೆ ಕೃಷಿ ಚಟುವಟಿಕೆಗೆ ಬಿಟ್ಟುಕೊಡಲಾಗುತ್ತದೆ ಎಂದರು.

Translate »