ಕ್ಯಾಲೆಂಡರ್ ಅವಾಂತರ: ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನ ಜಾತ್ರೆ ದಿನಾಂಕ ಗೊಂದಲ
ಮೈಸೂರು

ಕ್ಯಾಲೆಂಡರ್ ಅವಾಂತರ: ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನ ಜಾತ್ರೆ ದಿನಾಂಕ ಗೊಂದಲ

February 4, 2020

ಮೈಸೂರು, ಫೆ.3(ಎಂಟಿವೈ)- ಮೈಸೂರು ತಾಲೂಕಿನ ಸರ್ಕಾರಿ ಉತ್ತನಹಳ್ಳಿಯ ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವ ಸಂಬಂಧ ಉಂಟಾಗಿದ್ದ ಗೊಂದಲ ಮುಂದುವರೆದಿದ್ದು, ಸಂಪ್ರದಾಯದಂತೆ ಫೆ.9ರಂದೇ ಜಾತ್ರೆ ನಡೆಸುವುದು ಸೂಕ್ತ ಎಂದು ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಅಭಿಪ್ರಾಯಪಟ್ಟಿದ್ದು, ಗ್ರಾಮದ ಎಲ್ಲಾ ಕೋಮಿನ ಜನರ ಅಭಿಪ್ರಾಯ ಪಡೆದು, ಅಂತಿಮ ನಿರ್ಧಾರಕ್ಕೆ ಬರುವಂತೆ ಸಲಹೆ ನೀಡಿದ್ದಾರೆ.

1868ರಿಂದಲೂ ಅರಮನೆ ಪಂಚಾಂಗದಂತೆ ಪ್ರತಿ ವರ್ಷ ಮಾಘ ಮಾಸದ ಮೂರನೇ ಭಾನುವಾರದಂದೇ ಜ್ವಾಲಾಮುಖಿ ತ್ರಿಪುರ ಸುಂದರಿ ವರ್ಧಂತಿ ಮಹೋತ್ಸವ ನಡೆಸುವುದು ಸಂಪ್ರದಾಯ. ಇದರಂತೆ ಫೆ.9ರಂದು ಉತ್ತನ ಹಳ್ಳಿ ಜಾತ್ರೆ ನಡೆಯಬೇಕಾಗಿತ್ತು. ಆದರೆ ಕ್ಯಾಲೆಂಡರ್‍ನಲ್ಲಿ ಫೆ. 16ರಂದು ಉತ್ತನಹಳ್ಳಿ ಜಾತ್ರೆ ಎಂದು ದಾಖಲಾಗಿ ರುವುದರಿಂದ ಗ್ರಾಮಸ್ಥರಲ್ಲಿ ಗೊಂದಲ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಉತ್ತನಹಳ್ಳಿ ಗ್ರಾಮದ ಮುಖಂಡರ ನಿಯೋಗ ಇಂದು ಅರಮನೆಗೆ ಆಗಮಿಸಿ, ಪ್ರಮೋದಾ ದೇವಿ ಒಡೆಯರ್ ಅವರೊಂದಿಗೆ ಚರ್ಚಿಸಿದರು.

ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯದ ಪ್ರಧಾನ ಆಗಮಿಕ ಡಾ.ಎನ್.ಶಶಿಶೇಖರ್ ದೀಕ್ಷಿತ್, ಮುಜ ರಾಯಿ ಇಲಾಖೆ ತಹಶೀಲ್ದಾರ್ ಯತಿರಾಜ್, ರಾಜ ಪುರೋಹಿತರು ಪಾಲ್ಗೊಂಡಿದ್ದ ಸಭೆಯಲ್ಲಿ ರಾಜಪುರೋ ಹಿತರ ಸಲಹೆ ಪಡೆದ ಪ್ರಮೋದಾದೇವಿ ಒಡೆಯರ್, ಅರಮನೆ ಪಂಚಾಂಗದಂತೆ ಫೆ.9ರಂದೇ ಜಾತ್ರೆ ನಡೆಸುವುದು ಸೂಕ್ತ. ಕ್ಯಾಲೆಂಡರ್‍ನಲ್ಲಿ ಯಾಕೆ ತಪ್ಪಾಗಿ ದಿನಾಂಕ ಪ್ರಕಟವಾಗಿದೆ ಎಂದು ನಮಗೂ ತಿಳಿಯುತ್ತಿಲ್ಲ. ಈ ಗೊಂದಲ ನಿವಾರಣೆಗೆ ಗ್ರಾಮಸ್ಥರೇ ಸೂಕ್ತ ನಿರ್ಧಾರ ತಾಳಬೇಕು. ಗ್ರಾಮದ ಎಲ್ಲಾ ಜನಾಂಗಗಳ ಸಭೆ ನಡೆಸಿ, ಯಾವಾಗ ಜಾತ್ರೆ ನಡೆಸಬೇಕೋ ಎನ್ನುವುದನ್ನು ನಿರ್ಧರಿಸಬೇಕು. ಆದರೆ ಈ ವಿಚಾರದಲ್ಲಿ ನನ್ನ ಹೆಸರನ್ನು ಮಧ್ಯೆ ತರ ಬಾರದು. ಫೆ.9ರಂದೇ ವರ್ಧಂತಿ ಮಹೋತ್ಸವ ಪೂಜೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ದೇವಾಲಯ ನವೀಕರಣಕ್ಕೆ ವಿಷಾದ: ಅರಮನೆ ಗಮನಕ್ಕೆ ತರದೆ ಶ್ರೀ ಜ್ವಾಲಾಮುಖಿ ದೇವಸ್ಥಾನದ ನವೀಕರಣ ಕಾಮಗಾರಿ ನಡೆಸಲಾಗುತ್ತಿದೆ. ಹಿಂದಿನಿಂದಲೂ ಉತ್ತನಹಳ್ಳಿ ದೇವಾಲಯದ ವಿಚಾರಗಳು ಅರಮನೆಯ ಗಮನಕ್ಕೆ ಬರುತ್ತಿದ್ದವು. ಈಗ ದೇವಸ್ಥಾನದ ಕಟ್ಟಡ ನವೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಹೀಗಾದರೆ ಹೇಗೆ? ಈ ಹಿಂದೆ ಕಳ್ಳತನವಾದಾಗ ಅಗತ್ಯ ಸೌಲಭ್ಯ ಒದಗಿಸುವಲ್ಲಿ ಅರಮನೆ ಮಹತ್ವ ಪಾತ್ರ ವಹಿಸಿತ್ತು. ದೇವಸ್ಥಾನದ ಬಗೆಗೆ ನಮಗೂ ಕಾಳಜಿಯಿದೆ. ಹೀಗಿದ್ದರೂ ಕೆಲವು ವಿಚಾರಗಳು ನಮ್ಮ ಗಮನಕ್ಕೆ ಬರುತ್ತಿಲ್ಲ ಎಂದು ಪ್ರಮೋದಾದೇವಿ ಒಡೆಯರ್ ದೇವಸ್ಥಾನದ ಆಡಳಿತ ಮಂಡಳಿಯವರ ಮುಂದೆ ಅಸಮಾಧಾನ ವ್ಯಕ್ತಪಡಿ ಸಿದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ನಿರ್ಧಾರದ ಮೇಲೆ ಎಲ್ಲರ ಗಮನ: ಶ್ರೀ ಜ್ವಾಲಾಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಶಿಷ್ಟಾ ಚಾರದಂತೆ ಎಲ್ಲಾ ರೀತಿಯ ಕ್ರಮ ವಹಿಸುವುದು ಜಿಲ್ಲಾಧಿ ಕಾರಿಗಳ ವ್ಯಾಪ್ತಿಗೆ ಬರುತ್ತದೆ. ಜಾತ್ರೆ ದಿನಾಂಕ ಕುರಿತು ಉಂಟಾಗಿರುವ ಗೊಂದಲವನ್ನು ನಿವಾರಿಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಚಾರವಾಗಿ ಗ್ರಾಮಸ್ಥರು ಕಾದಿದ್ದಾರೆ.

Translate »