ಬಿಜೆಪಿಯಿಂದ ನಾಳೆ ಕೊಡಗು ಬಂದ್‍ಗೆ ಕರೆ
ಕೊಡಗು

ಬಿಜೆಪಿಯಿಂದ ನಾಳೆ ಕೊಡಗು ಬಂದ್‍ಗೆ ಕರೆ

May 27, 2018

ಮಡಿಕೇರಿ:  ಮುಖ್ಯಮಂತ್ರಿಯಾದರೂ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲಮನ್ನಾ ಮಾಡದ ಕುಮಾರಸ್ವಾಮಿ ಸರ್ಕಾರದ ವಿರುದ್ದ ಮೇ.28 ರಂದು ಕೊಡಗು ಜಿಲ್ಲಾ ಬಂದ್‍ಗೆ ಬಿಜೆಪಿ ಕರೆ ನೀಡಿದೆ.

ಜೆಡಿಎಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ 24 ಗಂಟೆಯೊಳಗಾಗಿ ರಾಷ್ಟ್ರಿಕೃತ ಮತ್ತು ಸಹಕಾರ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡಬೇಕಿತ್ತು. ಆದರೆ ಈಗ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರೂ ತಾನು ರೈತರಿಗೆ ನೀಡಿದ ಭರವಸೆಯನ್ನು ಮರೆತು ಬಿಟ್ಟಿದ್ದಾರೆ. ರೈತರ ಬಗೆಗಿನ ಕುಮಾರಸ್ವಾಮಿ ಕಾಳಜಿಯ ನಿಜಬಣ್ಣ ಬಯಲಾಗಿದೆ. ರೈತರ ಮೇಲಿನ ಜೆಡಿಎಸ್‍ನ ನಾಟಕದ ಕಾಳಜಿ ಖಂಡನೀಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಹೇಳಿದ್ದಾರೆ. ತಕ್ಷಣವೇ ರೈತರ ಸಾಲಮನ್ನಾ ಮಾಡಬೇಕೆಂದು ಒತ್ತಾಯಿಸಿ ಮೇ 28 ರಂದು ಕರ್ನಾಟಕ ಬಂದ್‍ಗೆ ಬಿಜೆಪಿ ಕರೆ ನೀಡಿದ್ದು, ಅಂತೆಯೇ ಕೊಡಗಿನಲ್ಲಿಯೂ ಬಂದ್ ನಡೆಯಲಿದೆ.

ಜಿಲ್ಲೆಯ ರೈತರು, ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಬಂದ್ ನಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ರೈತರ ಪರ ಬಿಜೆಪಿ ಹೋರಾಟದಲ್ಲಿ ಸುವ್ಯವಸ್ಥೆಗೆ ಭಂಗ ಬಾರದಂತೆ ಸಹಕರಿಸುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಹಾಗೂ ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಮನವಿ ಮಾಡಿದ್ದಾರೆ.

Translate »