ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕರೆ :ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಕರೆ
ಹಾಸನ

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಕರೆ :ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್.ತಿಮ್ಮಣ್ಣಾಚಾರ್ ಕರೆ

June 13, 2018

ಹಾಸನ: ಹದಿನಾಲ್ಕು ವರ್ಷ ದೊಳಗಿನ ಪ್ರತಿಯೊಂದು ಮಗುವೂ ಕಡ್ಡಾಯವಾಗಿ ಶಿಕ್ಷಣ ಪಡೆಯಬೇಕು. ಶಾಲೆಯಿಂದ ಹೊರಗುಳಿದು ಬಾಲ ಕಾರ್ಮಿಕರಾಗಿ ದುಡಿಯುವ ಮಕ್ಕಳನ್ನು ಪತ್ತೆ ಹಚ್ಚಿ ಮುಖ್ಯ ವಾಹಿನಿಗೆ ತರುವ ಮೂಲಕ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಎಲ್ಲರೂ ಕೈ ಜೋಡಿಸ ಬೇಕು ಎಂದು ಜಿಲ್ಲಾ ಕಾನೂನು ಸೇವೆ ಗಳ ಪ್ರಾಧಿಕಾರ ಅಧ್ಯಕ್ಷರೂ ಆದ ಜಿಲ್ಲಾ ಸತ್ರ ನ್ಯಾಯಾಧೀಶ ಕೆ.ಎಸ್. ತಿಮ್ಮಣ್ಣಾ ಚಾರ್ ಕರೆ ನೀಡಿದ್ದಾರೆ.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿ ಪಂ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳ ಲಾಗಿದ್ದ `ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಟುಂಬದಲ್ಲಿ ಹೆಚ್ಚು ಇರುವ ಮಕ್ಕಳು ಬಾಲ ಕಾರ್ಮಿಕರಾಗುತ್ತಿದ್ದಾರೆ. ಬಾಲ ಕಾರ್ಮಿಕ ಪದ್ಧತಿ ಒಂದು ಅನಿಷ್ಟ. ಪೋಷಕರು ತಮ್ಮ ಮಕ್ಕಳನ್ನು ಕೆಲಸಕ್ಕೆ ಸೇರಿಸದೆ ಶಿಕ್ಷಣ ಕೊಡಬೇಕು. ಸಮಾಜದಲ್ಲಿ ಸುಶಿಕ್ಷಿತರು, ಶ್ರೀಮಂತರು ಮಕ್ಕಳನ್ನು ದುಡಿಸಿಕೊಳ್ಳುತ್ತಿದ್ದಾರೆ. ಇದು ಸಂಪೂರ್ಣ ನಿರ್ಮೂಲನೆಯಾಗಬೇಕು. ಬಾಲ ಕಾರ್ಮಿಕರು ಕಂಡುಬಂದಲ್ಲಿ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಜೊತೆಗೆ ಮಕ್ಕಳ ರಕ್ಷಣೆಗೆ ಸಹಕರಿಸಬೇಕು ಎಂದ ಅವರು, ಇದು ನಿರಂತರವಾಗಿ ಅಂದೋಲನದ ರೀತಿ ನಡೆಯುವ ಮೂಲಕ ಬಾಲ ಕಾರ್ಮಿಕ ಪದ್ಧತಿ ವಿರೋಧಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಡಿಸಿ ಬಿ.ಆರ್. ಪೂರ್ಣಿಮಾ ಮಾತನಾಡಿ, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆ ಕುರಿತು ಪ್ರಮಾಣ ವಚನ ಬೋಧಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಸದಸ್ಯ ಕಾರ್ಯದರ್ಶಿ ಸಿ.ಕೆ. ಬಸವರಾಜ್, ಉಪ ಕಾರ್ಮಿಕ ಆಯುಕ್ತ ಎ.ಹೆಚ್. ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಪದ್ಮ ಮಾತನಾಡಿದರು. ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವಾಮ ರಾಜ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹೆಚ್. ಮಂಜುನಾಥ್, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಎಂ.ಕೆ.ಧರಣ , ಜಿಲ್ಲಾ ಉದ್ಯೋಗಾ ಧಿಕಾರಿ ಜೆ.ಬಿ.ವಿಜಯಲಕ್ಷ್ಮಿ ಇದ್ದರು.

Translate »