ಭ್ರಷ್ಟಾಚಾರದ ಬಗ್ಗೆ ಬಾಯ್ಬಿಟ್ರೆ 2 ಸೆಕೆಂಡ್‍ನಲ್ಲಿ ಅಧಿಕಾರದಿಂದ ಕೆಳಗಿಳಿಸ್ತಾರೆ!
ಮೈಸೂರು

ಭ್ರಷ್ಟಾಚಾರದ ಬಗ್ಗೆ ಬಾಯ್ಬಿಟ್ರೆ 2 ಸೆಕೆಂಡ್‍ನಲ್ಲಿ ಅಧಿಕಾರದಿಂದ ಕೆಳಗಿಳಿಸ್ತಾರೆ!

June 12, 2018

ಬೆಂಗಳೂರು:  ಮಾರಕ ಕ್ಯಾನ್ಸರ್‍ನಂತೆ ಹಬ್ಬಿರುವ ಭ್ರಷ್ಟಾಚಾರವನ್ನು ತಕ್ಷಣವೇ ಮಟ್ಟ ಹಾಕಲು ಹೋದರೆ ಎರಡು ಸೆಕೆಂಡ್‍ಗಳಲ್ಲಿ ಅಧಿಕಾರದಿಂದ ಕೆಳ ಗಿಳಿಸುತ್ತಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಇಂದಿಲ್ಲಿ ಅಸಹಾಯಕತೆ ತೋಡಿಕೊಂಡಿದ್ದಾರೆ.

ವಿಧಾನಸೌಧದ 3ನೇ ಮಹಡಿಯಲ್ಲಿ ಭ್ರಷ್ಟಾಚಾರ ತಡೆಗಟ್ಟಬಹುದು. ಆದರೆ, ಆಳವಾಗಿ ಬೇರೂರಿರುವ ಭ್ರಷ್ಟಾ ಚಾರವನ್ನು ಬುಡಸಮೇತ ಕಡಿಯಲು ಹೋದರೆ ಅದು ನಮ್ಮ ಮೇಲೇ ಬೀಳುತ್ತದೆ. ಭ್ರಷ್ಟಾಚಾರವನ್ನು ಸಂಪೂರ್ಣ ವಾಗಿ ಅಲ್ಲದಿದ್ದರೂ, ಅದನ್ನು ತೊಡೆದುಹಾಕಲು ಸಾಕಷ್ಟು ಸಮಯಾವಕಾಶ ಬೇಕು ಎಂದಿದ್ದಾರೆ. ಸ್ವಾತಂತ್ರ್ಯ ಯೋಧರು ಹಾಗೂ ಗಾಂಧಿ ಅನುಯಾಯಿಗಳು ನಗರದ ಗಾಂಧಿ ಭವನ ದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ನಾನಂತೂ ಭ್ರಷ್ಟಾಚಾರ ಮಾಡುವುದಿಲ್ಲ, ನನಗೆ ಹಣವೂ ಬೇಕಿಲ್ಲ, ಈಗಾಗಲೇ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೇನೆ, ನನ್ನ ಬದುಕು ಯಾವತ್ತು, ಹೇಗೆ ಎಂಬುದು ತಿಳಿದಿಲ್ಲ. ಅಧಿಕಾರದಲ್ಲಿ ಇರುವಷ್ಟು ದಿನ ರೈತರ, ಬಡವರ ಸೇವೆ ಮಾಡಿ ಭ್ರಷ್ಟಾಚಾರದ ವಿಷಜಂತು ವನ್ನು ನಿರ್ಮೂಲನೆ ಮಾಡುವ ಪ್ರಯತ್ನ ಮಾಡುತ್ತೇನೆ.

ಇತ್ತೀಚೆಗೆ ಶೃಂಗೇರಿ ಮಠದ ಗುರುಗಳು ನಮಗೆ ಸರ್ಕಾರ ದಿಂದ ಯಾವ ಸೇವೆಯೂ ಅಗತ್ಯವಿಲ್ಲ, ಸಾಮಾನ್ಯ ಜನರ ಜೀವಕ್ಕೆ ಕುತ್ತಾಗಿರುವ ಭ್ರಷ್ಟಾಚಾರ ಕೊನೆಗೊಳಿಸಿ ಎಂದು ಸಲಹೆ ನೀಡಿದ್ದಾರೆ. ಶ್ರೀಗಳ ಮುಂದೆ ಸುಳ್ಳು ಭರವಸೆ ನೀಡ ಬಾರದೆಂದು ಇರುವ ವಾಸ್ತವ ತಿಳಿಸಿದ್ದೇನೆ, ಮೂರನೇ ಮಹಡಿಯಲ್ಲಿ ಭ್ರಷ್ಟಾಚಾರ ತಡೆಯಬಹುದು, ಇದಕ್ಕೆ ಈಗಿ ನಿಂದಲೇ ಕಾರ್ಯಪ್ರವೃತ್ತನಾಗುತ್ತೇನೆ, ಆದರೆ, ಇಡೀ ಸರ್ಕಾರದ ಮಟ್ಟದಲ್ಲಿ ಭ್ರಷ್ಟಾಚಾರ ತಡೆಗೆ ಕಾಲಾವಕಾಶ ಬೇಕಾಗಿದೆ. ನನಗೆ ಪೂರ್ಣ ಬಹುಮತ ಬಂದಿದ್ದರೆ, ಅಗತ್ಯ ಕಾನೂನು ತಂದು ಭ್ರಷ್ಟಾಚಾರ ತಡೆಗೆ ಕಠಿಣ ಕ್ರಮ ತೆಗೆದುಕೊಳ್ಳು ತ್ತಿದ್ದೆ, ಆದರೆ, ಇಂದಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ.

ವರ್ಗಾವಣೆ ಪ್ರಕ್ರಿಯೆಯಿಂದಲೇ ಭ್ರಷ್ಟಾಚಾರ ಆರಂಭ ಗೊಳ್ಳುತ್ತದೆ, ವಿಧಾನಸೌಧದ 3ನೇ ಮಹಡಿಯಲ್ಲಿ ದಲ್ಲಾಳಿ ಗಳ ಹಾವಳಿ ಇದೆ. ಅವರು ಅಧಿಕಾರಿಗಳ ಬಳಿ ನನಗೆ ಮುಖ್ಯ ಮಂತ್ರಿ ಗೊತ್ತು, ಅಧಿಕಾರಿ ಗೊತ್ತು ಎಂದು ಹೇಳಿಕೊಂಡು, 5-10 ಕೋಟಿ ರೂ. ಪಡೆದು ಈ ದಂಧೆಗೆ ಕಾರಣರಾಗುತ್ತಿದ್ದಾರೆ. ನನಗೆ ಇದರ ಎಲ್ಲಾ ಮರ್ಮಗಳು ತಿಳಿದಿವೆ, ಸವಾಲನ್ನು ಸ್ವೀಕ ರಿಸಿ, ಭ್ರಷ್ಟಾಚಾರ ಹತ್ತಿಕ್ಕಿ ಗಾಂಧಿ ತತ್ವಗಳನ್ನು ಅಳವಡಿಸಲು ಮುಂದಾ ಗುವ ಭರವಸೆಯನ್ನು ಹಿರಿಯರಿಗೆ ನೀಡುತ್ತೇನೆ ಎಂದರು.

ಅಧಿಕಾರಿಗಳು ಜನ ಸಾಮಾನ್ಯರ ಕಷ್ಟ-ಸುಖ-ಬೇಡಿಕೆಗಳನ್ನು ಅರಿತು ಕೆಲಸ ಮಾಡಿದರೆ ಭ್ರಷ್ಟಾಚಾರಕ್ಕೆ ಮೊದಲು ನಾಂದಿ ಹಾಡಿದಂತಾಗುತ್ತದೆ. ಸರ್ಕಾರದಿಂದ ಸಾಕಷ್ಟು ವೇತನ ಪಡೆ ಯುವ ಅಧಿಕಾರಿಗಳು ದುರಾಸೆಯಿಂದ ಹಣ ಮಾಡಲು ಹೋಗಿ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ. ಕಳೆದ ಸರ್ಕಾರ ಅವರಿಗೆ 6ನೇ ವೇತನ ಆಯೋಗದ  ಶಿಫಾರಸ್ಸನ್ನು ಜಾರಿಗೊಳಿಸಿರುವುದರಿಂದ ಬೊಕ್ಕಸದ ಮೇಲೆ 17 ಸಾವಿರ ಕೋಟಿ ರೂ. ಹೆಚ್ಚಿನ ಹೊರೆ ಬೀಳುತ್ತಿದೆ. ಜನರ ತೆರಿಗೆ ಹಣದಲ್ಲಿ ವೇತನ ಪಡೆಯುವ ಅಧಿಕಾರಿಗಳು ತಮ್ಮ ಸೇವೆಯನ್ನು ಅವರಿಗೇ ಮುಡಿಪು ಇಡಬೇಕು. ಅಧಿಕಾರಿಗಳನ್ನು ಸರಿ ದಾರಿಗೆ ತರಲು ನಾನು ಕಾಲಹರಣ ಮಾಡುವುದಿಲ್ಲ, ಇದರ ಜೊತೆಗೆ ಜನರ ಸೇವೆಯನ್ನು ಮಾಡಿಕೊಂಡು ಹೋಗುತ್ತೇನೆ. ರೈತರಿಗೆ ನೀಡಿರುವ ಭರವಸೆಯಂತೆ ಇನ್ನು 15 ದಿನಗಳಲ್ಲಿ ಅವರ ಕೃಷಿ ಸಾಲ ಮನ್ನಾ ಮಾಡುವುದಲ್ಲದೆ, ಇದರಿಂದ ಆಗುವ ಆರ್ಥಿಕ ಹೊರೆಯನ್ನು ಸರಿದೂಗಿಸಿಕೊಂಡು ಹಣಕಾಸು ಇಲಾಖೆ ಮೇಲೆ ಹೊರೆ ಬೀಳದಂತೆ ಅಭಿವೃದ್ಧಿ ಕಾರ್ಯವನ್ನೂ ಮಾಡುವುದಾಗಿ ಹೇಳಿದರು.

Translate »