ಬೇಲೂರಿನಲ್ಲಿ 1.15 ಲಕ್ಷ ರೂ. ಅಕ್ರಮ ಮದ್ಯ ವಶ
ಹಾಸನ

ಬೇಲೂರಿನಲ್ಲಿ 1.15 ಲಕ್ಷ ರೂ. ಅಕ್ರಮ ಮದ್ಯ ವಶ

June 13, 2018

ಬೇಲೂರು: ಅಕ್ರಮವಾಗಿ ಶೇಖರಿಸಿಟ್ಟಿದ್ದ 1.15 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ತಹಶೀಲ್ದಾರ್ ವಶಪಡಿಸಿಕೊಂಡಿದ್ದಾರೆ.ತಾಲೂಕಿನ ಕುಶಾವರ ಗ್ರಾಪಂ ವ್ಯಾಪ್ತಿಗೆ ಸೇರುವ ಕೌರಿ ಗ್ರಾಮದ ರಾಜಶೇಖರ ಎಂಬುವರ ಪಾಳುಬಿದ್ದ ಮನೆಯಲ್ಲಿ ಮದ್ಯ ಶೇಖರಣೆ ಮಾಡಿರುವ ಬಗ್ಗೆ ಬಂದ ಮಾಹಿತಿ ಆಧರಿಸಿ ತಹಶೀಲ್ದಾರ್ ಉಮೇಶ್ ಅವರು ಸಿಬ್ಬಂದಿಯೊಂದಿಗೆ ಸಂಜೆ 4.45ರಲ್ಲಿ ದಾಳಿ ನಡೆಸಿದಾಗ ಮದ್ಯ ಶೇಖರಣೆ ಮಾಡಿರುವುದು ಖಚಿತಗೊಂಡಿದೆ.

ಒರಿಜನಲ್ ಛಾಯ್ಸ್ 42 ಬಾಕ್ಸ್ ಮದ್ಯ ಯಾರಿಗೆ ಸೇರಿದ್ದೆಂದು ತಿಳಿದುಬಂದಿಲ್ಲ. ಮನೆ ಮಾಲೀಕ ರಾಜಶೇಖರನನ್ನು ವಿಚಾರಿಸಿದಾಗ ಮದ್ಯ ಶೇಖರಣೆ ಮಾಡಿರುವುದು ನನಗೂ ಗೊತ್ತಿಲ್ಲ. ಮದ್ಯ ಇದ್ಡ ಮನೆಯು ಪಾಳು ಬಿದ್ದಿದ್ದು, ಇದನ್ನು ಬಳಕೆ ಮಾಡುತ್ತಿಲ್ಲ. ಆ ಕಾರಣ ಯಾರೋ ಆಗದವರು ಮದ್ಯವನ್ನು ತಂದು ನನಗೆ ಸೇರಿದ ಮನೆಯಲ್ಲಿ ಇಟ್ಟಿದ್ದಾರೆಂದು ತಿಳಿಸಿದ್ದಾರೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದರು.

ಶಂಕೆ: ಇದೇ ತಿಂಗಳ 16ರಂದು ನಡೆಯಲಿರುವ ಅನುಘಟ್ಟ ತಾಪಂ ಉಪಚುನಾವಣೆಗೆ ಸಂಬಂಧಿಸಿದಂತೆ ಅನುಘಟ್ಟ ತಾಪಂ ಕ್ಷೇತ್ರಕ್ಕೆ ಸೇರುವ ಕೌರಿ ಗ್ರಾಮದಲ್ಲಿ ಮದ್ಯ ಶೇಖರಣೆ ಮಾಡಿರುವ ಬಗ್ಗೆ ಗುಸುಗುಸು ಸುದ್ದಿ ಹರಡುತ್ತಿದೆ. ಈ ಮದ್ಯ ಯಾವ ಅಭ್ಯರ್ಥಿ ಪರವಾಗಿ ಹಂಚಲು ಇಡಲಾಗಿದೆ ಎಂಬುದು ತಿಳಿದುಬಂದಿಲ್ಲ

Translate »