ಕಾರು-ಸ್ಕೂಟರ್ ಅಪಘಾತ ವರ್ಗಾವಣೆ ಪತ್ರ ತರಲು ಹೋಗಿದ್ದ ತಂದೆ ಸಾವು, ಪುತ್ರಿ ಪಾರು
ಹಾಸನ

ಕಾರು-ಸ್ಕೂಟರ್ ಅಪಘಾತ ವರ್ಗಾವಣೆ ಪತ್ರ ತರಲು ಹೋಗಿದ್ದ ತಂದೆ ಸಾವು, ಪುತ್ರಿ ಪಾರು

May 27, 2018

ಹಾಸನ: ಸ್ಕೂಟರ್‍ಗೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಸವಾರ ಸಾವನ್ನಪ್ಪಿದ್ದು, ಯುವತಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆಂಚಟ್ಟಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ನಗರದ ಸಂಗಮೇಶ್ವರ ಬಡಾವಣೆಯ ವಾಸಿ ಬಿಜೆಪಿ ನಗರ ಮಂಡಲ ಉಪಾಧ್ಯಕ್ಷ ಧರ್ಮ ಪ್ರಕಾಶ್(48) ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪುತ್ರಿ ಪ್ರಿಯಾಂಕ ಗಂಭೀರವಾಗಿ ಗಾಯಗೊಂಡಿದ್ದು, ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾರೆ.

ಧರ್ಮ ಪ್ರಕಾಶ್‍ರ ಪುತ್ರಿ ಪ್ರಿಯಾಂಕ ನಗರದ ಹೊರ ವಲಯ ಬೆಂಗಳೂರು ರಸ್ತೆಯಲ್ಲಿರುವ ಹೆಚ್‍ಕೆಎಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ದ್ವಿತೀಯ ಪಿಯು ಪರೀಕ್ಷೆ ಮುಗಿದಿದ್ದರಿಂದ ವರ್ಗಾವಣೆ ಪತ್ರ, ಅಂಕಪಟ್ಟಿ ತರಲೆಂದು ಪ್ರಕಾಶ್ ಮಗಳೊಂದಿಗೆ ಆಕ್ಟೀವಾ ಹೊಂಡದಲ್ಲಿ ತೆರಳಿದ್ದರು. ಕಾಲೇಜಿನಿಂದ ದಾಖಲೆ ಪಡೆದು ವಾಪಸ್ಸಾಗುವಾಗ ಬೆಂಗಳೂರಿನ ಕಡೆಯಿಂದ ವೇಗವಾಗಿ ಬಂದ ಸ್ಕೊಡಾ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಧರ್ಮ ಪ್ರಕಾಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುತ್ರಿ ಪ್ರಿಯಾಂಕಗೂ ಗಂಭೀರವಾದ ಗಾಯಗಳಾಗಿವೆ. ಅಲ್ಲದೆ ಮಹಿಳೆ ಸೇರಿದಂತೆ ಕಾರಿನಲ್ಲಿದ್ದ ಮೂವರೂ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತದಿಂದ ಆಕ್ಟೀವಾ ಹೊಂಡ ಮುಂಭಾಗ ನಜ್ಜುಗುಜ್ಜಾಗಿದ್ದು, ಕಾರು ರಸ್ತೆ ಬದಿಗೆ ಉರುಳಿ ಜಖಂಗೊಂಡಿದೆ. ಮೃತ ಧರ್ಮ ಪ್ರಕಾಶ್ ದೇಹವನ್ನು ನಗರದ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.

Translate »