ಕೊಳ್ಳೇಗಾಲ: ಇಲ್ಲಿನ ನಗರಸಭೆ ನೂತನ ಅಧ್ಯಕ್ಷರಾಗಿ ಭೀಮನಗರದ 3ನೇ ವಾರ್ಡ್‍ನ ಸದಸ್ಯ ರಮೇಶ್ ಶುಕ್ರವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಎಸ್.ರಮೇಶ್ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನೆಲೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಧಿಕಾರಿ ಫೌಜಿಯಾ ತರನ್ನುಮ್ ಘೋಷಿಸಿದರು.
ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದ ನಗರಸಭೆ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಎಸ್.ರಮೇಶ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಾಜಿ ಶಾಸಕ ಎಸ್ ಜಯಣ್ಣ. ಎ.ಆರ್.ಕೃಷ್ಣಮೂರ್ತಿ, ಜಿಲ್ಲಾಧ್ಯಕ್ಷ ಮರಿಸ್ವಾಮಿ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದರು.
ಈಗಾಗಲೇ ಕಾಂಗ್ರೆಸ್ ವರಿಷ್ಠರು ಮೊದಲ ಅವಧಿಗೆ ಕಾಂಗ್ರೆಸ್ ಮಲ್ಲಿಕಾರ್ಜುನ ಹಾಗೂ 2ನೇ ಅವಧಿಗೆ ಬಸ್ತಿಪುರ ಶಾಂತರಾಜು ಹಾಗೂ 3ನೇ ಅವಧಿಗೆ ರಮೇಶ್ ಅವರಿಗೆ ನೀಡಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆ ಕೊನೆಯ ನಾಲ್ಕು ತಿಂಗಳ ಅವಧಿಗೆ ಅಧ್ಯಕ್ಷ ಗಾದಿಯನ್ನು ರಮೇಶ್ ಅವರಿಗೆ ನೀಡಲು ವರಿಷ್ಠರು ನಿರ್ಣಯಿಸಿದ್ದ ಹಿನ್ನೆಲೆ ಹಿಂದಿನ ಅದ್ಯಕ್ಷ ಶಾಂತರಾಜು ರಾಜೀನಾಮೆ ನೀಡಿದ್ದರು. ರಮೇಶ್ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಅಧ್ಯಕ್ಷ ಶಾಂತರಾಜು. ಪ್ರಭಾರ ಅಧ್ಯಕ್ಷ ಶಿವಾನಂದ್. ಮುಡಿಗುಂಡ ಪ್ರದೀಪ್ ಹಾಜರಿದ್ದರು. ರಮೇಶ್ ಅವರ ಆಯ್ಕೆ ಘೋಷಿಸುತ್ತಿದ್ದಂತೆ ಭೀಮನಗರದ ನಿವಾಸಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.