ಕುಮಾರಸ್ವಾಮಿಗೆ ವಿಶ್ವಾಸ ಮತ
ಮೈಸೂರು

ಕುಮಾರಸ್ವಾಮಿಗೆ ವಿಶ್ವಾಸ ಮತ

May 26, 2018

ಬೆಂಗಳೂರು:  ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ಬುಧವಾರ ಅಧಿಕಾರ ಸ್ವೀಕರಿಸಿದ್ದ ಎಚ್ ಡಿ ಕುಮಾರಸ್ವಾಮಿ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಪಡೆಯುವಲ್ಲಿ ಯಶಸ್ವಿಯಾದರು.

ಪ್ರತಿಪಕ್ಷ ಬಿಜೆಪಿಯ ಸಭಾತ್ಯಾಗದ ನಡುವೆಯೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಶ್ವಾಸಮತ ಸಾಬೀತುಪಡಿಸಿದರು. ಆರು ತಿಂಗಳ ಮಟ್ಟಿಗೆ ಸರ್ಕಾರಕ್ಕೆ ಯಾವುದೇ ಗಂಡಾಂತರವಿಲ್ಲ. ರಾಜ್ಯಪಾಲರು, ಕುಮಾರಸ್ವಾಮಿಗೆ 15 ದಿನಗಳ ಕಾಲಾವಕಾಶ ನೀಡಿದ್ದರು. ಮುಖ್ಯಮಂತ್ರಿಯವರ ವಿಶ್ವಾಸ ಮತ ಮಂಡನೆ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ತಮ್ಮ ಮಾತು ಮುಗಿಸಿ, ಕಲಾಪವನ್ನು ಬಹಿಷ್ಕರಿಸಿ, ತಮ್ಮ ಪಕ್ಷದ ಸದಸ್ಯರೊಟ್ಟಿಗೆ ಸದನದಿಂದ ಹೊರ ನಡೆದರು.
ಯಡಿಯೂರಪ್ಪ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ, ಕೊನೆಯಲ್ಲಿ ಸದನದಲ್ಲಿ ವಿಶ್ವಾಸ ಮತ ಕೋರಿದರು. ಸಭಾಧ್ಯಕ್ಷರು ಪ್ರಸ್ತಾವವನ್ನು ಧ್ವನಿಮತಕ್ಕೆ ಹಾಕಿ, ಬೆಂಬಲಿಸುತ್ತೇವೆ ಎನ್ನುವವರು ಹೌದು ಎಂದು, ಬೆಂಬಲಿಸದವರು ಇಲ್ಲ ಎಂದು ಹೇಳುವಂತೆ ಕೋರಿದರು.

ಬಳಿಕ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಸದಸ್ಯರು ಹೌದು ಎಂದು ಧ್ವನಿ ಮತದ ಮೂಲಕ ಬಹುಮತ ತೋರಿದರು. ನಂತರ, ಸಭಾಧ್ಯಕ್ಷರು ವಿಶ್ವಾಸಮತವನ್ನು ಅನುಮೋದಿಸಿದರು. ವಿಶ್ವಾಸಮತ ಸಿಗುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಶಾಸಕರು ಪರಸ್ಪರ ಹಸ್ತಲಾಘವ ಮಾಡಿದರು. ಮುಖ್ಯಮಂತ್ರಿ ಬಳಿಗೆ ಬಂದು ಶುಭ ಕೋರಿದರು.

ಬಿಜೆಪಿ ಆಪರೇಷನ್ ಕಮಲದ ಮೂಲಕ ತಮ್ಮ ಸದಸ್ಯರನ್ನು ಸೆಳೆದು, ವಿಶ್ವಾಸಮತ ಬೀಳಿಸಬಹುದೆಂಬ ಭೀತಿಯಲ್ಲಿದ್ದ ಕಾಂಗ್ರೆಸ್-ಜೆಡಿಎಸ್‍ಗೆ ಇದರಿಂದ ನಿರಾಳವಾಯಿತು.

ಸರ್ಕಾರ ರಚಿಸಲು ಉಭಯಪಕ್ಷಗಳು ತೀರ್ಮಾನ ತೆಗೆದುಕೊಂಡ ನಂತರ ತಮ್ಮ ಸದಸ್ಯರನ್ನು ಕಳೆದ ಹತ್ತು ದಿನಗಳಿಂದ ಹೋಟೆಲ್ ಮತ್ತು ರೆಸಾರ್ಟ್‍ನಲ್ಲಿ ಆ ಪಕ್ಷದ ನಾಯಕರು ಹಿಡಿದಿಟ್ಟಿದ್ದರು.

ವಿಶ್ವಾಸಮತ ಯಾಚನೆ ಆರಂಭಕ್ಕೂ ಮುನ್ನ ಉಭಯ ಪಕ್ಷದ ಸದಸ್ಯರನ್ನು ಪ್ರತ್ಯೇಕವಾಗಿ ವಿಧಾನಸಭೆಗೆ ಕರೆತಂದಿದ್ದಲ್ಲದೆ, ಕುಮಾರಸ್ವಾಮಿಯವರು ಸದನದಲ್ಲಿ ಬಹುಮತ ಸಾಬೀತುಪಡಿಸುವವರೆಗೂ ಅವರ ಮೇಲೆ ಪಕ್ಷದ ನಾಯಕರು ಕಣ್ಗಾವಲಿಟ್ಟಿದ್ದರು.

ಸ್ವತಃ ಕೇಂದ್ರದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜ್ಯ ಉಸ್ತುವಾರಿ ಹೊಣೆ ಹೊತ್ತ ಕೆ.ಸಿ. ವೇಣುಗೋಪಾಲ್ ವಿಧಾನಸಭೆ ಮೊಗಸಾಲೆ ಹಾಗೂ ಅಧಿಕಾರಿಗಳಿಗೆ ಮೀಸಲಿರಿಸಿದ್ದ ಆಸನದಲ್ಲಿ ಅಸೀನರಾಗಿದ್ದರು.

ಇತ್ತ ಜೆಡಿಎಸ್ ಶಾಸಕರನ್ನು ಆ ಪಕ್ಷದ ವಿಧಾನ ಪರಿಷತ್ ಸದಸ್ಯರು, ಅವರ ಬೇಕು-ಬೇಡಗಳನ್ನು ಈಡೇರಿಸಿದುದ್ದು ಕಂಡು ಬಂದಿತು. ಕುಮಾರಸ್ವಾಮಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಪಡೆಯುತ್ತಿದ್ದಂತೆ ಕಾಂಗ್ರೆಸ್, ಜೆಡಿಎಸ್‍ನ ಸದಸ್ಯರು ಸ್ವತಂತ್ರ ಹಕ್ಕಿಯಂತೆ ಹೊರ ಬಂದು ತಮ್ಮ ಕ್ಷೇತ್ರಗಳತ್ತ ತೆರಳಿದರು.

Translate »