ರಮೇಶ್ ಕುಮಾರ್ ಸ್ಪೀಕರ್ ಆಗಿ ಅವಿರೋಧ ಆಯ್ಕೆ
ಮೈಸೂರು

ರಮೇಶ್ ಕುಮಾರ್ ಸ್ಪೀಕರ್ ಆಗಿ ಅವಿರೋಧ ಆಯ್ಕೆ

May 26, 2018

ಬೆಂಗಳೂರು: ಕಾಂಗ್ರೆಸ್‍ನ ರಮೇಶ್ ಕುಮಾರ್ ವಿಧಾನಸಭಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸಭಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುರೇಶ್‍ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಧಾನಸಭೆಯಲ್ಲಿ ಪ್ರಸ್ತಾಪ ಮಾಡದೇ ಕೈಬಿಟ್ಟಿದ್ದರಿಂದ ರಮೇಶ್‍ಕುಮಾರ್ ಎರಡನೇ ಬಾರಿಗೆ ವಿಧಾನಸಭಾಧ್ಯಕ್ಷರಾದರು.

ವಿಧಾನಸಭೆ ಆರಂಭಗೊಳ್ಳುತ್ತಿದ್ದಂತೆ ಹಂಗಾಮಿ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಸಭಾಧ್ಯಕ್ಷರ ಚುನಾವಣಾ ಪ್ರಕ್ರಿಯೆ ಕೈಗೆತ್ತಿಕೊಳ್ಳುತ್ತಿದ್ದಂತೆ ಸುರೇಶ್ ಕುಮಾರ್ ಅವರು ನಾಮಪತ್ರ ವಾಪಸ್ ಪಡೆದರು.

ಸುನೀಲ್ ಕುಮಾರ್ ಅವರು, ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಕುಮಾರ್ ಅವರನ್ನು ಸೂಚಿಸುತ್ತಿಲ್ಲ ಎಂದು ಹೇಳಿದರು. ಅದಕ್ಕೆ ಸಮ್ಮತಿ ಇರುವುದಾಗಿ ಸುರೇಶ್ ಕುಮಾರ್ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯಗೆ ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ರಮೇಶ್ ಕುಮಾರ್ ಅವರ ಹೆಸರನ್ನು ಸ್ಪೀಕರ್ ಸ್ಥಾನಕ್ಕೆ ಸೂಚಿಸಿದರು, ನೂತನ ಡಿಸಿಎಂ ಡಾ. ಪರಮೇಶ್ವರ್ ಅವರು ಅದನ್ನು ಅನುಮೋದಿಸಿದರು. ಧ್ವನಿಮತದ ಬಳಿಕ ರಮೇಶ್ ಕುಮಾರ್ ಅವರನ್ನು ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆ ಮಾಡಿರುವುದಾಗಿ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಘೋಷಿಸಿದರು. ತದ ನಂತರ ನೂತನ ಸ್ಪೀಕರ್ ರಮೇಶ್ ಕುಮಾರ್ ಅವರು ಸ್ಪೀಕರ್ ಪೀಠವನ್ನು ಅಲಂಕರಿಸಿದರು.
ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ ಮಾತನಾಡಿದ ರಮೇಶ್ ಕುಮಾರ್, ಸಾಂವಿಧಾನಿಕ ನಿಯಮಾವಳಿಗಳಿಗೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಬೇಕಿದೆ ಎಂದರು.

ಎರಡನೇ ಬಾರಿಗೆ ಸ್ಪೀಕರ್ ಆಗಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತೇನೆ. ನಿಮ್ಮೆಲ್ಲರ ನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆ ನೀಡಿದರು. ನನಗೆ ರಾಜಕೀಯ ಅವಕಾಶ ಕಲ್ಪಿಸಿದ್ದು ದೇವರಾಜ್ ಅರಸ್ ಎಂದು ರಮೇಶ್ ಕುಮಾರ್ ನೆನಪಿಸಿಕೊಂಡರು.

Translate »