ಡಿ.ಕೆ.ಶಿವಕುಮಾರ್ ಅವರೇ ದ್ರೋಹ ಮಾಡಿದ ವ್ಯಕ್ತಿ ಸಿಎಂ ಆಗಲು ಸಹಕಾರ ನೀಡಿ ಅಪರಾಧ ಮಾಡಿದ್ದೀರಿ…
ಮೈಸೂರು

ಡಿ.ಕೆ.ಶಿವಕುಮಾರ್ ಅವರೇ ದ್ರೋಹ ಮಾಡಿದ ವ್ಯಕ್ತಿ ಸಿಎಂ ಆಗಲು ಸಹಕಾರ ನೀಡಿ ಅಪರಾಧ ಮಾಡಿದ್ದೀರಿ…

May 26, 2018
  • ಖಳನಾಯಕ ನೀವೆ ಶಿವಕುಮಾರ್ ಅವರೇ…
  • ಅಪ್ಪ-ಮಕ್ಕಳ ವಿರುದ್ಧವೇ ಇನ್ನು ಹೋರಾಟ
  • ದುರ್ಯೋಧನ ಕುಮಾರಸ್ವಾಮಿ ಮನೆ ದೇವರು
  •  ವಿನಾಶಕಾರನ ಬಾಯಲ್ಲಿ ವಿಕಾಸದ ಮಾತು
  • ಕೊಳ್ಳಿದೆವ್ವ ಭಗವದ್ಗೀತೆ ಹೇಳಿದಂತೆ
  • ಇದು ದಿನಗೂಲಿ ಸರ್ಕಾರ

ಬೆಂಗಳೂರು: ಡಿ.ಕೆ.ಶಿವಕುಮಾರ್ ಅವರೇ ನೀವು ಯಾರೂ ಮಾಡದ ಅಪರಾಧ ಮಾಡಿದ್ದೀರಿ. ದ್ರೋಹ ಮಾಡಿದ ವ್ಯಕ್ತಿ ಸಿಎಂ ಆಗಲು ನೀವು ಸಹಕಾರ ಮಾಡಿದ್ದೀರಿ. ಸಹಕಾರ ನೀಡಿ ಎಂದು ಆ ಕಡೆ ನನ್ನ ಸ್ನೇಹಿತರನ್ನು ಮನವಿ ಮಾಡಿದ್ದು ನಿಜ. ಆದರೆ ಕುಮಾರಸ್ವಾಮಿಯವರ ಮುಳುಗುವ ದೋಣಿ ಯಲ್ಲಿ ನೀವು ಮುಳುಗುವುದಕ್ಕೆ ಅಭ್ಯಂತರವಿಲ್ಲ ಎಂದು ಯಡಿಯೂರಪ್ಪ ಅವರು ಡಿಕೆಶಿಗೆ ಟಾಂಗ್ ನೀಡಿದರು.

ನಾನು ನಿಮ್ಮನ್ನು ಹೊಗಳಿ ಲಾಭ ಮಾಡಿಕೊಳ್ಳುವ ಅಗತ್ಯವಿಲ್ಲ ಸಿದ್ದರಾಮಯ್ಯನವರೇ. ಆದರೆ ಸರ್ಕಾರ ರಚನೆಗೆ ಕುಮಾರಸ್ವಾಮಿಯನ್ನು ದೆಹಲಿಗೆ ಕರೆಸುತ್ತಾರೆ. ರಾಜ್ಯದ ನಾಯಕರು ಯಾರೂ ಬರಬಾರದು ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳುತ್ತದೆ ಎಂದರೆ ಏನು? ಇದರ ನೇತೃತ್ವ ವಹಿಸಿದ ಖಳ ನಾಯಕ ನೀವೇ ಶಿವಕುಮಾರ್ ಅವರೇ. ನಮ್ಮ ಹೋರಾಟ ಭ್ರಷ್ಟ ರಾಜಕಾರಣದ ಮೂಲಕ ಅಧಿಕಾರಕ್ಕೆ ಬಂದ ಅಪ್ಪ ಮಕ್ಕಳ ವಿರುದ್ಧವೇ ಹೊರತು, ಕಾಂಗ್ರೆಸ್ ವಿರುದ್ಧ ಅಲ್ಲ. ನಾವು ಕಾಂಗ್ರೆಸ್‍ನವರಿಗೆ ಇನ್ನು ಮುಂದೆ ಸಾರ್ವಜನಿಕವಾಗಿ ಏನೂ ಹೇಳಲ್ಲ ಎಂದರು.

ಐದು ವರ್ಷ ಪೂರ್ಣಗೊಳಿಸಿ ನಮಗೆ ಬೇಜಾರಿಲ್ಲ. ನಮಗೆ ಪ್ರತಿಪಕ್ಷ ಸ್ಥಾನ ನೀಡಲಾಗಿದೆ. ಆದರೆ ಮೊದಲ ಸುದ್ದಿಗೋಷ್ಠಿಯಲ್ಲೇ ಮಠಾಧೀಶರಿಗೆ ಅಪಮಾನ ಮಾಡಿದ್ದೀರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಎಂದು ಬಾಯಿ ತಪ್ಪಿ ಹೇಳಿ ನಂತರ ಕ್ಷಮಿಸಿ ಎಂದು ಯಡಿಯೂರಪ್ಪ ತಪ್ಪು ಸರಿಪಡಿಸಿಕೊಂಡರು.

ನಾಗರಹಾವಿನ ದ್ವೇಷಕ್ಕೂ 12 ವರ್ಷ, ಕುಮಾರಸ್ವಾಮಿ ರೋಷ ನಾಗರಹಾವಿಗೂ ಹೆಚ್ಚು. ದುರ್ಯೋಧನ, ಕುಮಾರಸ್ವಾಮಿ ಅವರ ಮನೆ ದೇವರಾಗಿರಬೇಕು. ವಿನಾಶವೇ ದುರ್ಯೋಧನನ ಸಂಕಲ್ಪ. ಅದೇ ರೀತಿ ಕುಮಾರಸ್ವಾಮಿ ಎನ್ನುವ ವಿನಾಶಕಾರನ ಬಾಯಲ್ಲಿ ವಿಕಾಸದ ಮಾತು ಕೊಳ್ಳಿದೆವ್ವ ಭಗವದ್ಗೀತೆ ಹೇಳಿದಂತೆ. ನಂಬಿದವರನ್ನು ಮುಗಿಸುವುದೇ ಕುಮಾರಸ್ವಾಮಿ ಗುಣ.

ಧರಂಸಿಂಗ್ ನಂತರ ಬಿಜೆಪಿಗೂ ಅದೇ ಮಾಡಿ, ಅಧಿಕಾರದ ದಾಹ ತೀರಿಸಿಕೊಂಡರು. ನಾನು ಡಿಸಿಎಂ ಆಗಿ ನೀರಾವರಿಗೆ ಟೊಂಕಕಟ್ಟಿ ನಿಲ್ಲದಿದ್ದರೆ ನಿಮ್ಮ ಬಣ್ಣ ಬಯಲಾಗುತ್ತಿತ್ತು. ಸಾಂದರ್ಭಿಕ ಶಿಶು ಎಂದರೆ ಬಣ್ಣ ಬದಲಿಸುವ ಊಸರವಳ್ಳಿ ಎನ್ನಲ್ಲ. ಯಾಕೆಂದರೆ ಅದು ಬರೀ ಬಣ್ಣ ಬದಲಿಸುತ್ತೆ, ಆದರೆ ಇವರು ಹಾಗಲ್ಲ. ಈ ಸರ್ಕಾರಕ್ಕೆ ಹಿಂದಿಲ್ಲ ಮುಂದಿಲ್ಲ, ಬರೀ ದಿನಗೂಲಿ ಸರ್ಕಾರ ಎಂದು ತರಾಟೆಗೆ ತೆಗೆದುಕೊಂಡರು.

Translate »