ಮೈಸೂರು: ಕಾಯಕವೇ ಕೈಲಾಸ ಎಂಬ ನೀತಿಯನ್ನು ಚಾಚೂ ತಪ್ಪದೆ ಪಾಲಿಸುತ್ತಿರುವ ಮೈಸೂರಿನ ಅಶೋಕಪುರಂ ನಿವಾಸಿಯೊಬ್ಬರು ಕಳೆದ 31 ವರ್ಷಗಳಿಂದ ಮೈಸೂರಿನ ದೇವರಾಜ ಅರಸ್ ರಸ್ತೆ ಬದಿಯಲ್ಲಿ ನಿಲ್ಲುವ ಕಾರುಗಳನ್ನು ತೊಳೆಯುವ ಕಾಯಕ ವನ್ನು ರೂಢಿಸಿಕೊಂಡು ಸಂತೃಪ್ತ ಜೀವನ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.
ಅಶೋಕಪುರಂ ನಿವಾಸಿ ದೇವರಾಜು ಎಂಬುವರೇ ಕಾರು ತೊಳೆಯುವ ಕಾಯಕ ವನ್ನೇ ಅವಲಂಬಿಸಿ, ಗ್ರಾಹಕರ ನಂಬಿಕೆ ಗಳಿಸಿ ಸೇವೆ ನೀಡುತ್ತಿರುವವರು. ರಸ್ತೆ ಗಿಳಿಯುತ್ತಿರುವ ಹೊಸ ಹೊಸ ವಾಹನ ಗಳ ಸಂಖ್ಯೆಗೆ ಅನುಗುಣವಾಗಿ ಸರ್ವಿಸ್ ಸ್ಟೇಷನ್‍ಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ ದೇವರಾಜು ಅವರಿಗೆ ಗ್ರಾಹಕರ ಸಂಖ್ಯೆ ಇಳಿಮುಖವಾಗಿಲ್ಲ.
ಎಲ್ಲಿ: ಜೆಎಲ್‍ಬಿ ರಸ್ತೆ ಜಂಕ್ಷನ್‍ನಿಂದ ಸ್ವಲ್ಪ ಕೆಳಗೆ ದೇವರಾಜ ಅರಸ್ ರಸ್ತೆಯ ಲ್ಲಿರುವ ಕಾಫಿ ಮನೆ ಎದುರು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಒಂದು ಬಕೆಟ್, ಜಗ್, ಮೂರ್ನಾಲ್ಕು ಟವೆಲ್ ಹಿಡಿದು ಕೊಂಡು ಬಂದು ನಿಲ್ಲುವ ದೇವರಾಜು ಮಧ್ಯಾಹ್ನ 1 ಗಂಟೆವರೆಗೂ ಅದೇ ಸ್ಥಳದಲ್ಲಿರುತ್ತಾರೆ. ವಿವಿಧ ಅಂಗಡಿಗೆ ಬರುವವರು ಸೂಚಿಸಿದರೆ ಅವರ ಕಾರನ್ನು ತೊಳೆಯುತ್ತಾರೆ. ಪ್ರತಿದಿನ ಬೆಳಿಗ್ಗೆ ವಾಯು ವಿಹಾರಕ್ಕೆ ಬರುವವರು ಹಾಗೂ ಮಹಾರಾಜ ಕಾಲೇಜು ಮೈದಾನದಲ್ಲಿ ಆಟವಾಡಲು ಬರುವವರು ತಮ್ಮ ಕಾರನ್ನು ದೇವರಾಜು ಅವರಿಂದಲೇ ತೊಳೆಸುತ್ತಾರೆ. 7 ಗಂಟೆ ಬಳಿಕ ಕಾಫಿ, ಉಪಾಹಾರ ಸೇವಿಸಲು ಬರುವವರು ತಮ್ಮ ಕಾರನ್ನು ತೊಳೆಯು ವಂತೆ ಹೇಳುತ್ತಾರೆ. ಪ್ರತಿದಿನ 5ರಿಂದ 10 ಕಾರುಗಳನ್ನು ತೊಳೆಯುತ್ತಾರೆ.
ನೀರಿನ ಮಿತ ಬಳಕೆ: ದೇವರಾಜು ಕಾರನ್ನು ತೊಳೆಯಲು ಒಂದು ಅಥವಾ ಎರಡು ಬಕೆಟ್ ನೀರನ್ನಷ್ಟೇ ಬಳಸುತ್ತಾರೆ. ಮಿತ ವಾಗಿ ನೀರನ್ನು ಬಳಸಿ ಕಾರು ಹೊಳೆಯು ವಂತೆ ಮಾಡುತ್ತಾರೆ. ಅಚ್ಚುಕಟ್ಟಾದ ಸೇವೆ ಯಿಂದ ಕಾರುಗಳ ಮಾಲೀಕರೂ ಸಂತೃಪ್ತ ರಾಗುತ್ತಾರೆ. ಕೆಲವರು ಹತ್ತಾರು ವರ್ಷ ದಿಂದ ಇವರ ಬಳಿಯೇ ಕಾರನ್ನು ತೊಳೆಸಿ ಕೊಂಡು ಹೋಗುತ್ತಿದ್ದಾರೆ. ಇದರಿಂದಲೇ ದೇವರಾಜು ಜೀವನದ ಬಂಡಿ ಸಾಗುತ್ತಿದೆ.
– ಎಂ.ಟಿ.ಯೋಗೇಶ್ ಕುಮಾರ್