ಜ.30ರವರೆಗೆ ಸುಯೋಗ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಹೃದ್ರೋಗ ತಪಾಸಣೆ ಶಿಬಿರ
ಮೈಸೂರು

ಜ.30ರವರೆಗೆ ಸುಯೋಗ್ ಆಸ್ಪತ್ರೆಯಲ್ಲಿ ವೈದ್ಯರಿಗೆ ಹೃದ್ರೋಗ ತಪಾಸಣೆ ಶಿಬಿರ

January 3, 2019

ಮೈಸೂರು: ಸುಯೋಗ್ ಆಸ್ಪತ್ರೆ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳ ಸಂಯುಕ್ತಾಶ್ರಯಲ್ಲಿ ಜ.30ರವರೆಗೆ ಒಂದು ತಿಂಗಳ ಕಾಲ ವೈದ್ಯರಿಗೆ ಉಚಿತ ಹೃದ್ರೋಗ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸುಯೋಗ್ ಆಸ್ಪತ್ರೆ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಮೈಸೂರು ರಾಮಕೃಷ್ಣನಗರದಲ್ಲಿರುವ ಸುಯೋಗ ಆಸ್ಪತ್ರೆಯಲ್ಲಿ ತಪಾಸಣಾ ಶಿಬಿರ ನಡೆಯಲಿದೆ. ವೈದ್ಯರು ವೃತ್ತಿಯಲ್ಲಿನ ಒತ್ತಡದಿಂದ ತಮ್ಮ ಆರೋಗ್ಯದತ್ತ ಗಮನ ಹರಿಸದೇ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಹೀಗಾಗಿ ಗುಪ್ತವಾಗಿ ಎದುರಾಗುವ ಲಕ್ಷಣ ಹೊಂದಿರುವ ಹೃದ್ರೋಗದ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ ಎಂದು ವಿವರಿಸಿದರು.

ಭಾರತೀಯ ವೈದ್ಯರ ಸಂಘದ ಮೈಸೂರು ಶಾಖೆ, ಕುಟುಂಬ ವೈದ್ಯರ ಸಂಘ ಸೇರಿದಂತೆ ವಿವಿಧ ವೈದ್ಯಕೀಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜ.1ರಿಂದ 30ರವರೆಗೆ (ಭಾನುವಾರ ಹೊರತುಪಡಿಸಿ) ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ತಪಾಸಣೆ ಶಿಬಿರ ನಡೆಯಲಿದೆ. ಪ್ರತಿದಿನ 20 ವೈದ್ಯರಿಗೆ ಹೃದ್ರೋಗಕ್ಕೆ ಸಂಬಂಧಪಟ್ಟಂತೆ ತಪಾಸಣೆ ಮಾಡಲಾಗುವುದು. ಶಿಬಿರದಲ್ಲಿ ಇಸಿಜಿ, ಇಕೋ, ಟಿಎಂಟಿ, ರಕ್ತ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಗುವುದು. ಹೃದ್ರೋಗ ತಜ್ಞರಿಂದ ಉಚಿತ ಸಲಹೆ ನೀಡಲಾಗುವುದು. ಆ್ಯಂಜಿಯೋಗ್ರಾಂ, ಆ್ಯಂಜಿಯೋಪ್ಲಾಸ್ಟಿ ಮತ್ತಿತರ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುವುದು. ತಪಾಸಣೆಗಾಗಿ ನೋಂದಾಯಿಸಿಕೊಳ್ಳಬೇಕಿದ್ದು, ವಿವರಗಳಿಗೆ ದೂ.0821-2566966, 9739555908 ಅನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.

ಮೈಸೂರು ನಗರ ವ್ಯಾಪ್ತಿಯಲ್ಲಿ ಸುಮಾರು 2 ಸಾವಿರಕ್ಕೂ ಹೆಚ್ಚು ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ತಪಾಸಣೆಗಾಗಿ ಈಗಾಗಲೇ 50ಕ್ಕೂ ಹೆಚ್ಚು ಮಂದಿ ನೋಂದಾಯಿಸಿ ಕೊಂಡಿದ್ದು, ಪ್ರತಿಯೊಬ್ಬ ವೈದ್ಯರೂ ಶಿಬಿರದ ಪ್ರಯೋಜನ ಪಡೆಯಬೇಕೆಂದು ಕೋರಿದರು. ಎಪಿಐ ಅಧ್ಯಕ್ಷ ಡಾ.ಲಕ್ಷ್ಮೀಗೌಡ, ಐಎಂಎ ಮೈಸೂರು ಶಾಖೆ ಚುನಾಯಿತ ಅಧ್ಯಕ್ಷ ಡಾ.ಸುರೇಶ್ ರುದ್ರಪ್ಪ, ಖಜಾಂಚಿ ಡಾ.ಎನ್.ಚಂದ್ರಭಾನ್ ಸಿಂಗ್, ಕುಟುಂಬ ವೈದ್ಯರ ಸಂಘದ ಅಧ್ಯಕ್ಷ ಡಾ.ನಾಗೇಂದ್ರ ಪ್ರಸಾದ್, ಕಾರ್ಯದರ್ಶಿ ಡಾ.ಆದಿಶೇಷಯ್ಯ ಗೋಷ್ಠಿಯಲ್ಲಿದ್ದರು.

Translate »