ಕಾವೇರಿ ನೀರಾವರಿ ನಿಗಮ ಹೊರ ಗುತ್ತಿಗೆ ನೌಕರರ ಪ್ರತಿಭಟನೆ
ಮೈಸೂರು

ಕಾವೇರಿ ನೀರಾವರಿ ನಿಗಮ ಹೊರ ಗುತ್ತಿಗೆ ನೌಕರರ ಪ್ರತಿಭಟನೆ

August 9, 2018

ಮೈಸೂರು:  ಖಾಯಂ ಮಾಡಿ ಇಎಸ್‍ಐ, ಪಿಎಫ್ ಸೌಲಭ್ಯ ಕಲ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಬುಧವಾರ ಮೈಸೂರಿನ ಮಂಜುನಾಥ ಪುರದಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿಯ ಮುಂದೆ ಬುಧವಾರ ನೀರುಗಂಟಿಗಳು ಸೇರಿದಂತೆ ಹೊರ ಗುತ್ತಿಗೆ ನೌಕರರು ಬೃಹತ್ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾ ಮಂಡಲದ ನೇತೃತ್ವದಲ್ಲಿ ಇಂದು ನಡೆದ ಪ್ರತಿಭಟನೆಯಲ್ಲಿ ವರುಣಾ ನಾಲಾ ಸೇರಿದಂತೆ ಕಾವೇರಿ ನೀರಾವರಿ ನಿಗಮದ ವ್ಯಾಪ್ತಿಯ ವಿವಿಧ ಕಚೇರಿಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನೀರುಗಂಟಿಗಳು, ಕಂಪ್ಯೂಟರ್ ಆಪರೇಟರ್‍ಗಳು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರು ಪಾಲ್ಗೊಂಡು ಖಾಯಂ ಮಾಡುವಂತೆ ಆಗ್ರಹಿಸಿದರು.

ಕಳೆದ ಹಲವು ವರ್ಷಗಳಿಂದ ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಉತ್ತಮವಾಗಿ ಕೆಲಸ ನಿರ್ವಹಿಸಿ ಕೊಂಡು ಬಂದಿದ್ದರೂ ಇದುವರೆಗೂ ಸರ್ಕಾರದ ವತಿಯಿಂದ ನ್ಯಾಯ ದೊರೆತಿಲ್ಲ. ಸರ್ವೋಚ್ಛ ನ್ಯಾಯಾಲಯವು ಈಗಾಗಲೇ ಹೊರಗುತ್ತಿಗೆ ನೌಕರರಿಗೆ ಕನಿಷ್ಠವೇತನ ನೀಡುವಂತೆ ಆದೇಶಿಸಿದೆ. ಕನಿಷ್ಠ ವೇತನದ ಕಾಯಿದೆಯಂತೆ ಪಿಎಫ್, ಇಎಸ್‍ಐ ವ್ಯವಸ್ಥೆ ಜಾರಿಗೊಳಿಸಬೇಕು. ಪ್ರತಿ ತಿಂಗಳು 5ರಂದು ಸಂಬಳ ಪಾವತಿ ಯಾಗಬೇಕು. ಎಲ್ಲ ವರ್ಗದ ಹೊರಗುತ್ತಿಗೆ ನೌಕರರಿಗೆ ಬ್ಯಾಂಕ್ ಖಾತೆಯ ಮೂಲಕ ವೇತನ ಪಾವತಿಸಬೇಕು. ಹೊರಗುತ್ತಿಗೆ ನೌಕರರಿಗೆ ವರ್ಷ ಪೂರ್ತಿ ಕೆಲಸ ನೀಡಬೇಕು. ಹಾಲಿ ಹೊರಗುತ್ತಿಗೆ ಕೆಲಸ ಮಾಡುವ ನೌಕರರನ್ನು ತೆಗೆಯಬಾರದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಗುತ್ತಿಗೆ ನೌಕರರ ಸಂಘದ ಮುಖಂಡ ಡಾ.ಕೆ.ಶರ್ಮಾ, ಜಿಲ್ಲಾಧ್ಯಕ್ಷ ಜಿ.ರಮೇಶ್, ಜಿಲ್ಲಾ ಉಪಾಧ್ಯಕ್ಷ ಹರೀಶ್, ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷ ಎನ್.ಸಿದ್ದಯ್ಯ, ಮೈಸೂರು ಮತ್ತು ಚಾಮರಾಜನಗರ ಕಾರ್ಯದರ್ಶಿ ಎಸ್.ಎಂ.ಜಯಶೇಖರ್, ಮಂಡ್ಯ ಜಿಲ್ಲಾಧ್ಯಕ್ಷ ಜಿ.ಅಪ್ಪಯ್ಯ, ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸೇಗೌಡ ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.

Translate »