ಸಂಬಳಕ್ಕಾಗಿ ಟಾಸ್ಕ್ ವರ್ಕ್ ನೌಕರರ ಪ್ರತಿಭಟನೆ
ಮಂಡ್ಯ

ಸಂಬಳಕ್ಕಾಗಿ ಟಾಸ್ಕ್ ವರ್ಕ್ ನೌಕರರ ಪ್ರತಿಭಟನೆ

August 7, 2018

ಭಾರತೀನಗರ: ಸಂಬಳ ನೀಡು ವಂತೆ ಆಗ್ರಹಿಸಿ ಟಾಸ್ಕ್ ವರ್ಕ್ ದಿನಗೂಲಿ ನೌಕರರು ಪ್ರತಿಭಟನೆ ನಡೆಸಿದರು.
ಇಲ್ಲಿನ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಸಮಾವೇಶಗೊಂಡ ಸೌಡಿಗಳು, ಕಳೆದ 4 ತಿಂಗಳಿಂದ ಸಂಬಳದ ಜೊತೆಗೆ ಕಳೆದ 1 ವರ್ಷದಿಂದ ಬರಬೇಕಾಗಿರುವ ಉಳಿಕೆ ಸಂಬಳ ನೀಡಿಲ್ಲ ಎಂದು ಆರೋಪಿಸಿ ನೀರಾವರಿ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸಂಬಳ ಸಿಗದ ಹಿನ್ನೆಲೆಯಲ್ಲಿ ಮಕ್ಕ ಳನ್ನು ಶಾಲಾ-ಕಾಲೇಜಿಗೆ ಸೇರಿಸುವುದು ಸೇರಿದಂತೆ ಕುಟುಂಬ ನಿರ್ವಹಣೆ ಮಾಡಲು ಕಷ್ಟವಾಗಿದೆ. ಸಂಬಳವಿಲ್ಲದೇ ನಾವು ಕೆಲಸ ನಿರ್ವಹಿಸುತ್ತಿದ್ದೇವೆ. ನಮಗೆ ಬರಬೇಕಾದ ಸಂಬಳ ನೀಡುವಂತೆ ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರಯೋಜನ ವಾಗಿಲ್ಲ. ಅಲ್ಲದೇ ಶಾಸಕ ಡಾ.ಅನ್ನದಾನಿ ಕೂಡ ಸಂಬಳ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರೂ ಇದುವರೆಗೂ ಸಂಬಳ ಪಾವತಿ ಮಾಡಿಲ್ಲ. ಇದರಿಂದ ಬೇಸತ್ತು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಆರೋಪಿಸಿದರು.

ಇಲ್ಲಿನ ಅಧಿಕಾರಿಗಳು ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದಾರೆ. ಆದರೆ ಸೌಡಿಗಳಿಗೆ ಮಾತ್ರ ಸಂಬಳ ನೀಡದೇ ಕಡೆಗಣಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು. ಈ ಭಾಗದ ಸೌಡಿಗಳು 30 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರಿಗೆ ಮೂಲ ಸೌಲಭ್ಯ ಒದಗಿಸುವಲ್ಲಿ ನೀರಾವರಿ ಇಲಾಖೆ ವಿಫಲವಾಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸಿ ವೇತನ ಕೊಡಿಸಬೇಕೆಂದು ಒತ್ತಾಯಿಸಿದರು.

4 ತಿಂಗಳ ಮತ್ತು 1 ವರ್ಷದ ಉಳಿಕೆ ವೇತನವನ್ನು ಕೂಡಲೇ ನೀಡದಿದ್ದರೆ ಮದ್ದೂರು ಮತ್ತು ಮಳವಳ್ಳಿ ತಾಲೂಕಿನ ಕಾವೇರಿ ನೀರಾವರಿ ನಿಗಮದ ಕಚೇರಿಗೆ ಮುತ್ತಿಗೆ ಹಾಕಿ ಮುಷ್ಕರ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಸೌಡಿಗಳಾದ ಕ್ಯಾತಘಟ್ಟ ಕೆ.ಎಲ್.ಬೋರೇಗೌಡ, ಡಿ.ಎ.ಕೆರೆ ನಾಗರಾಜು, ಡಿ.ಹಲಸಹಳ್ಳಿ ಸಿದ್ದರಾಮು, ಹೊಸೂರು ಸಿದ್ದರಾಜು, ಹುಸ್ಕೂರು ಸಿದ್ದಗಂಗಾಧರ್, ಕುಲುಮೆದೊಡ್ಡಿ ನಾಗ, ಶ್ರೀನಿವಾಸ್, ಅಗಸನಪುರ ನಾಗರಾಜು ಸೇರಿದಂತೆ ಇತರರಿದ್ದರು.

Translate »