ಸಿದ್ದರಾಮಯ್ಯ ಸೊಸೆ ಒಡೆತನದ ಪಬ್ ಮೇಲೆ ಸಿಸಿಬಿ, ಅಬಕಾರಿ ಅಧಿಕಾರಿಗಳ ದಾಳಿ
ಮೈಸೂರು

ಸಿದ್ದರಾಮಯ್ಯ ಸೊಸೆ ಒಡೆತನದ ಪಬ್ ಮೇಲೆ ಸಿಸಿಬಿ, ಅಬಕಾರಿ ಅಧಿಕಾರಿಗಳ ದಾಳಿ

November 10, 2018

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸೊಸೆ ಒಡೆತನದ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರ ಪುತ್ರ ದಿ. ರಾಕೇಶ್ ಸಿದ್ದರಾಮಯ್ಯ ಅವರ ಪತ್ನಿ ಸ್ಮಿತಾ ಒಡೆತನದ ಪಬ್ ಮೇಲೆ ಸಿಸಿಬಿ ಪೊಲೀಸರು, ಅಬಕಾರಿ ಇಲಾಖೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ ಬೀಗ ಜಡಿದಿದ್ದಾರೆ. ಲೀ ಮೆರಿಡಿಯನ್ ಹೋಟೆಲ್‍ನಲ್ಲಿ ಸ್ಮಿತಾ ಅವರು ‘ಮೈ ಶುಗರ್ ಫ್ಯಾಕ್ಟರಿ’ ಎಂಬ ಪಬ್ ನಡೆಸುತ್ತಿದ್ದಾರೆ. ಈ ಹಿಂದೆ ಇದನ್ನು ರಾಕೇಶ್ ಸಿದ್ದರಾಮಯ್ಯ ನೋಡಿಕೊಳ್ಳುತ್ತಿದ್ದರು. ಅವರ ನಿಧನದ ನಂತರ ಕಿರುತೆರೆ ನಟ ರೋಹನ್ ಗೌಡ ಹಾಗೂ ಸ್ಮಿತಾ ನಿರ್ವಹಣೆ ಮಾಡುತ್ತಿದ್ದಾರೆ.

ನಿನ್ನೆ ರಾತ್ರಿ ಅವಧಿಗೂ ಮೀರಿ ಪಬ್ ನಡೆಯುತ್ತಿದ್ದರಿಂದ ಸಿಸಿಬಿ ತಂಡ ಹಾಗೂ ಅಬಕಾರಿ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ನೋಟೀಸ್ ಜಾರಿ ಮಾಡಿದ್ದಾರೆ. ಅಬಕಾರಿ ಇಲಾಖೆ ನಿಯಮದ ಪ್ರಕಾರ ರಾತ್ರಿ 1 ಗಂಟೆವರೆಗಷ್ಟೇ ಪಬ್ ತೆರೆಯಬೇಕು. ಆದರೆ ‘ಶುಗರ್ ಫ್ಯಾಕ್ಟರಿ’ ಪಬ್ ಮುಂಜಾನೆ 4 ಗಂಟೆವರೆಗೂ ತೆರೆದಿದ್ದರಿಂದ ಸಿಸಿಬಿ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬೀಗ ಜಡಿದಿದ್ದಾರೆ.

10 ದಿನದೊಳಗೆ ನೋಟೀಸ್‍ಗೆ ಉತ್ತರ ನೀಡಬೇಕು ಇಲ್ಲದಿದ್ದರೆ ಶಾಶ್ವತವಾಗಿ ಬೀಗ ಜಡಿಯಲಾಗುವುದು ಎಂದೂ ಎಚ್ಚರಿಸಿದ್ದಾರೆ. ‘ಮೈ ಶುಗರ್ ಫ್ಯಾಕ್ಟರಿ’ ಪಬ್ ಅವಧಿಗೂ ಮೀರಿ ತೆರೆದಿದ್ದರಿಂದ ದಾಳಿ ಮಾಡಲಾಗಿದೆ. ನಿಯಮವನ್ನು ಉಲ್ಲಂಘಿಸಿದ್ದರಿಂದ ನೋಟೀಸ್ ನೀಡಿದ್ದೇವೆ. ಒಂದು ವೇಳೆ 10 ದಿನದೊಳಗೆ ಉತ್ತರ ಬಾರದಿದ್ದರೆ ಕಾನೂನು ಪ್ರಕಾರವೇ ಕ್ರಮ ಕೈಗೊಳ್ಳುತ್ತೇವೆ ಎಂದು ಬೆಂಗಳೂರು ಪಶ್ಚಿಮ ವಲಯದ ಅಬಕಾರಿ ಆಯುಕ್ತ ಶಿವನೇಗೌಡ ತಿಳಿಸಿದ್ದಾರೆ.

Translate »