ಮೈಸೂರು-ಕುಶಾಲನಗರ ರೈಲ್ವೆ ಕಾಮಗಾರಿಗೆ ಕೇಂದ್ರ ಹಸಿರು ನಿಶಾನೆ
ಮೈಸೂರು

ಮೈಸೂರು-ಕುಶಾಲನಗರ ರೈಲ್ವೆ ಕಾಮಗಾರಿಗೆ ಕೇಂದ್ರ ಹಸಿರು ನಿಶಾನೆ

February 28, 2019

ಮೈಸೂರು: ಮೈಸೂರು (ಬೆಳಗೊಳ)-ಕುಶಾಲ ನಗರ ರೈಲ್ವೆ ಯೋಜನೆಯ ಬಹು ವರ್ಷಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ತಮ್ಮ ಅವಿರತ ಪ್ರಯತ್ನದಿಂದ ಮೈಸೂರು (ಬೆಳಗೊಳ)-ಕುಶಾಲನಗರ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ದಿಂದ ಅನುಮೋದನೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು (ಬೆಳಗೊಳ)-ಕುಶಾಲನಗರ ಒಟ್ಟು 87 ಕಿಲೋ ಮೀಟರ್ ಉದ್ದದ ರೈಲ್ವೆ ಹಳಿ ಮಾರ್ಗ ಜೋಡಣೆ ಕಾಮಗಾರಿಗೆ ಇಂದು ರೈಲ್ವೆ ಸಚಿವಾಲಯವು ಹಸಿರು ನಿಶಾನೆ ತೋರಿದೆ. ಈ ಕಾಮಗಾರಿಗೆ 1854.62 ಕೋಟಿ ರೂ. ಅಂದಾಜು ವೆಚ್ಚ ನಿಗದಿಪಡಿಸಲಾಗಿದ್ದು, ಅದನ್ನು ಪಿಂಕ್ ಬುಕ್‍ನಲ್ಲಿ ನಮೂದಿ ಸುವಂತೆ ರೈಲ್ವೆ ಇಲಾಖೆ ಈಗಾಗಲೇ ಸೂಚಿಸಿದೆ.

ಈ ಯೋಜನೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಪರಿಸರವಾದಿಗಳ ವಿರೋಧದಿಂದ ಸರ್ವೇ ಕಾರ್ಯವೂ ಸೇರಿದಂತೆ ಕಾರ್ಯ ಯೋಜನೆಗೆ ತೊಡಕುಂಟಾಗಿತ್ತು.

ಈ ಹಿಂದೆ ಸಂಸದರಾಗಿದ್ದ ಅಡಗೂರು ಹೆಚ್.ವಿಶ್ವನಾಥ್ ಸಹ ಈ ಮಾರ್ಗದ ಯೋಜನೆಗೆ ಸಾಕಷ್ಟು ಪರಿಶ್ರಮ ವಹಿಸಿದ್ದರು. ಆದರೆ, ಪ್ರತಾಪ್ ಸಿಂಹ ಸಂಸದರಾಗಿ ಆಯ್ಕೆಯಾದ ನಂತರ ಈ ಯೋಜನೆ ಜಾರಿಗೆ ತೀವ್ರ ಆಸಕ್ತಿ ವಹಿಸುವುದರೊಂದಿಗೆ ಕೇಂದ್ರದ ಮೇಲೆ ಒತ್ತಡ ತಂದು ಅಂತೂ ಕಾಮಗಾರಿ ಆರಂಭವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಹು ವರ್ಷಗಳ ಕನಸಾಗಿದ್ದ ಈ ಯೋಜನೆಗೆ ಅನು ಮೋದನೆ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಮೈಸೂರು-ಕೊಡಗು ಜನತೆಯ ಪರವಾಗಿ ಸಂಸದ ಪ್ರತಾಪ್ ಸಿಂಹ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

Translate »