ಚಾಮರಾಜನಗರ ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ್ ನಾಮಪತ್ರ ಸಲ್ಲಿಕೆ
ಚಾಮರಾಜನಗರ, ಮೈಸೂರು

ಚಾಮರಾಜನಗರ ಮೈತ್ರಿ ಅಭ್ಯರ್ಥಿ ಧ್ರುವನಾರಾಯಣ್ ನಾಮಪತ್ರ ಸಲ್ಲಿಕೆ

March 26, 2019

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ, ಹಾಲಿ ಸಂಸದ ಆರ್.ಧ್ರುವನಾರಾಯಣ್ ಸೋಮವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸಿದರು.

ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಆರ್.ನರೇಂದ್ರ, ಯತೀಂದ್ರ ಸಿದ್ದರಾಮಯ್ಯ ಹಾಗೂ ಅನಿಲ್ ಚಿಕ್ಕ ಮಾದು ಅವರೊಂದಿಗೆ ಆಗಮಿಸಿದ ಧ್ರುವ ನಾರಾಯಣ್ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ 2 ಸೆಟ್ ಉಮೇದುವಾರಿಕೆ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೂ ಮುನ್ನ ಧ್ರುವ ನಾರಾಯಣ್ ತಮ್ಮ ಮನೆ ದೇವರು ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಶ್ರೀ ಬಿಳಿಗಿರಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿ ಸಿದರು. ನಂತರ ಚಾಮರಾಜನಗರಕ್ಕೆ ಆಗ ಮಿಸಿ ತಾರಾನಾಥ ಬೌದ್ಧ ವಿಹಾರಕ್ಕೆ ಭೇಟಿ ನೀಡಿ ನಮನ ಸಲ್ಲಿಸಿದರು. ತದನಂತರ ಇತಿ ಹಾಸ ಪ್ರಸಿದ್ಧ ಕೊಳದ ಗಣಪತಿ ಮತ್ತು ಶ್ರೀ ಚಾಮರಾಜೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಪೂಜೆ ಸಲ್ಲಿಸಿದರು.

ಭಾರೀ ಮೆರವಣಿಗೆ: ಶ್ರೀಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜಿಲ್ಲಾಡಳಿತ ಭವನದ ಮುಖ್ಯ ದ್ವಾರದವರೆಗೆ ಆರ್.ಧ್ರುವನಾರಾಯಣ್ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆಯಲ್ಲಿ ಆಗಮಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಆರ್.ನರೇಂದ್ರ, ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ಜಿಪಂ ಅಧ್ಯಕ್ಷೆ ಶಿವಮ್ಮ, ಪಕ್ಷದ ಜಿಲ್ಲಾ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜು ಇತರರು ತೆರೆದ ವಾಹನದಲ್ಲಿ ಇದ್ದು ಧ್ರುವನಾರಾಯಣ್ ಅವರಿಗೆ ಸಾಥ್ ನೀಡಿದರು. ಈ ವೇಳೆ ಇವರೆಲ್ಲರೂ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರಿಗೆ ಕೈ ಮುಗಿದು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಚಾಮುಲ್ ನಿರ್ದೇಶಕ ಹೆಚ್.ಎಸ್.ನಂಜುಂಡ ಪ್ರಸಾದ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಾಮರಾಜ್, ಜೆಡಿಎಸ್ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಮಹೇಶ್‍ಗೌಡ, ಜಿಪಂ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಕೆರಹಳ್ಳಿ ನವೀನ್, ಬಸವರಾಜು, ಪಕ್ಷದ ವೀಕ್ಷಕಿ ವಾಸಂತಿ ಶಿವಣ್ಣ, ಮುಖಂಡರಾದ ಹೆಚ್.ಸಿ.ಬಸವರಾಜು, ಬಿ.ಕೆ.ರವಿಕುಮಾರ್, ಆಲೂರು ರಾಜಶೇಖರ್, ಹೆಚ್.ಎಸ್.ನಂಜಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುನ್ನ, ಗುರುಸ್ವಾಮಿ, ತೋಟೇಶ್, ಎಂ.ವಿ.ಚಂದ್ರು, ರಾಜಶೇಖರ್, ಮುನಿರಾಜು, ಕೆಂಪಯ್ಯ, ಈಶ್ವರ್, ಶಿವಕುಮಾರ್ ಸೇರಿದಂತೆ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Translate »