ಮಂಡ್ಯದಲ್ಲಿ ನಿಖಿಲ್ ನಾಮಪತ್ರ ಸಲ್ಲಿಕೆ
ಮಂಡ್ಯ, ಮೈಸೂರು

ಮಂಡ್ಯದಲ್ಲಿ ನಿಖಿಲ್ ನಾಮಪತ್ರ ಸಲ್ಲಿಕೆ

March 26, 2019

ಮಂಡ್ಯ: ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಅವರು ಜನಸಾಗರದ ನಡುವೆ ಭಾರೀ ಮೆರವಣಿಗೆಯಲ್ಲಿ ತೆರಳಿ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು.

ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕುಟುಂಬ ಸಮೇತ ಚಾಮುಂಡೇಶ್ವರಿ ತಾಯಿಗೆ ಪೂಜೆ ಸಲ್ಲಿಸಿದ ನಂತರ ಮಂಡ್ಯಕ್ಕೆ ಆಗಮಿಸಿದ ಅವರು, ಕಾಳಿ ಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಮೆರವಣಿಗೆ ಯಲ್ಲಿ ತೆರಳಿ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಮಂಜುಶ್ರೀ ಅವರಿಗೆ ನಾಮಪತ್ರ ಸಲ್ಲಿಸಿ ದರು. ಈ ವೇಳೆ ಅವರ ತಾಯಿ, ಶಾಸಕಿ ಅನಿತಾ ಕುಮಾರಸ್ವಾಮಿ, ದೊಡ್ಡಪ್ಪ, ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಸಾಥ್ ನೀಡಿದರು. ಇದಕ್ಕೂ ಮುನ್ನ ಕಾಳಿಕಾಂಬ ದೇವಸ್ಥಾನದ ಬಳಿ ಚುನಾವಣಾ ಪ್ರಚಾರಕ್ಕೆ ಅನುಕೂಲವಾಗುವಂತೆ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದ ಎರಡು ವೋಲ್ವೋ ಬಸ್‍ಗಳನ್ನು ನಿಲ್ಲಿಸಲಾಗಿತ್ತು. ಈ ಬಸ್‍ಗಳ ಮೇಲೆ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಅಭ್ಯರ್ಥಿ ನಿಖಿಲ್‍ಕುಮಾರ್ ಮತ್ತು ಜೆಡಿಎಸ್ ಗುರುತಾದ
ತೆನೆ ಹೊತ್ತ ಮಹಿಳೆ ಚಿತ್ರಗಳು ರಾರಾಜಿಸುತ್ತಿದ್ದವು. ಕಾಳಿಕಾಂಬ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಅಭ್ಯರ್ಥಿ ನಿಖಿಲ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಮಲ್ಲನಾಯಕನಕಟ್ಟೆ ಗ್ರಾಮದ ಪ್ರಮೋದ್ ಎಂಬುವರ ಅಲಂಕೃತ ಎತ್ತಿನಗಾಡಿಯಲ್ಲಿ ನಿಂತು ಮೆರವಣಿಗೆ ಹೊರಟರು. ಸುಮಾರು ಸಾವಿರಕ್ಕೂ ಹೆಚ್ಚು ಎತ್ತಿನಗಾಡಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಅದರ ಹಿಂದೆ ವೋಲ್ವೊ ಬಸ್‍ನಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜನರತ್ತ ಕೈ ಬೀಸುತ್ತಾ ಸಾಗಿದರು. ಮೆರವಣಿಗೆ ಮಂಡ್ಯದ ಮಹಾವೀರ ಸರ್ಕಲ್ ಬಳಿ ಬರುತ್ತಿದ್ದಂತೆಯೇ ನಿಖಿಲ್ ಮತ್ತು ಸಿ.ಎಸ್. ಪುಟ್ಟರಾಜು ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿದ್ದ ವೋಲ್ವೊ ಬಸ್ ಹತ್ತಿ ಮೆರವಣಿಗೆಯಲ್ಲಿ ಸಾಗಿದರು.

ಮೆರವಣಿಗೆಯುದ್ದಕ್ಕೂ ಬಸ್‍ನಲ್ಲಿ ‘ಉಳುವ ಯೋಗಿಯ ನೋಡಲ್ಲಿ’ ರೈತ ಗೀತೆ ಮೊಳಗಿತು. ಈ ಗೀತೆಗೆ ಹಸಿರು ಸೀರೆಯುಟ್ಟ ಮಹಿಳೆಯರು ನೃತ್ಯ ಮಾಡುತ್ತಾ ವಿಶೇಷ ಮೆರಗು ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಪಟ ಕುಣಿತ, ಗೊಂಬೆ ಕುಣಿತ ಜನರ ಗಮನ ಸೆಳೆದವು. ಕಾಳಿಕಾಂಬ ದೇವಸ್ಥಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸುಮಾರು 2 ಕಿ.ಮೀ.ವರೆಗೆ ಜನಸಾಗರ ನೆರೆದಿತ್ತು.

ನಾಮಪತ್ರ ಸಲ್ಲಿಕೆ ನಂತರ ಜಿಲ್ಲಾಧಿಕಾರಿಗಳ ಕಚೇರಿಯ ಎದುರಿಗಿರುವ ಕಾವೇರಿ ವನದಲ್ಲಿ ಬಹಿರಂಗ ಸಭೆ ಏರ್ಪಡಿಸಲಾಗಿತ್ತು. ಸಭೆಗೆ ಯಾವುದೇ ರೀತಿಯ ವೇದಿಕೆಯನ್ನು ನಿರ್ಮಿಸಿರಲಿಲ್ಲ. ಮೆರವಣಿಗೆಯಲ್ಲಿ ಬಂದ ವೋಲ್ವೊ ಬಸ್ ಮೇಲೆಯೇ ನಿಂತು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್, ಅಭ್ಯರ್ಥಿ ನಿಖಿಲ್ ಇತರರು ಮಾತನಾಡಿದರು. ಮೆರವಣಿಗೆಯಲ್ಲಿ ಸಾವಿರಾರು ಯುವಕರು ಬೈಕ್ ರ್ಯಾಲಿ ನಡೆಸಿ ಗಮನ ಸೆಳೆದರು.

Translate »