ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಉಮೇದುವಾರಿಕೆ
ಮೈಸೂರು, ಹಾಸನ

ಹಾಸನ ಬಿಜೆಪಿ ಅಭ್ಯರ್ಥಿ ಎ.ಮಂಜು ಉಮೇದುವಾರಿಕೆ

March 26, 2019

ಹಾಸನ: ಹಾಸನ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಎ.ಮಂಜು ಸೋಮವಾರ ಸಹಸ್ರಾರು ಬೆಂಬಲಿಗ ರೊಂದಿಗೆ ತೆರಳಿ ನಾಮಪತ್ರ ಸಲ್ಲಿಸುವ ಮೂಲಕ ಅಧಿಕೃತವಾಗಿ ಕಣಕ್ಕಿಳಿದರು.

ನಾಮಪತ್ರ ಸಲ್ಲಿಕೆಗೂ ಮುನ್ನ ಹಾಸ ನಾಂಬ ಕಲಾಕ್ಷೇತ್ರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ನಡೆಸಿದ ರೋಡ್ ಶೋನಲ್ಲಿ 20 ಸಾವಿರಕ್ಕೂ ಹೆಚ್ಚು ಕಾರ್ಯ ಕರ್ತರು ಭಾಗವಹಿಸಿ, ಬೆಂಬಲ ಸೂಚಿ ಸಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ರಸ್ತೆಯುದ್ದಕ್ಕೂ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಘೋಷಣೆ ಕೂಗಿ ಕೇಸರಿ ಧ್ವಜ ಬೀಸಿ ಬೆಂಬಲ
ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ರೈತರು ಎತ್ತಿನಗಾಡಿಯಲ್ಲಿ ಬಂದಿದ್ದರು. ಕೆಲವು ಕಾರ್ಯಕರ್ತರು ಮೋದಿ ಮುಖವಾಡ ಧರಿಸಿ ಮೈ ತುಂಬ ಕೇಸರಿ ಬಣ್ಣ ಬಳಿದುಕೊಂಡು ಗಮನ ಸೆಳೆದರು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕøತಿಕ ಕಲಾತಂಡಗಳು ಪಾಲ್ಗೊಂಡಿದ್ದವು. ಸಾವಿರಾರು ಬೆಂಬಲಿಗರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಭ್ಯರ್ಥಿ ಎ.ಮಂಜು ಅವರು ಶಾಸಕ ಪ್ರೀತಂ ಜೆ.ಗೌಡ, ಸೇರಿದಂತೆ ಇತರೆ ಬೆಂಬಲಿಗರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಅಕ್ರಂಪಾಷ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಇದಕ್ಕೂ ಮೊದಲು ನಗರದ ಮಹಾರಾಜ ಪಾರ್ಕ್ ರಸ್ತೆ ಬಳಿಯ ಶ್ರೀಸೀತಾ ರಾಮಾಂಜನೇಯ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಹಳೇ ಮಟನ್ ಮಾರ್ಕೆಟ್ ವೃತ್ತ, ಕೃಷ್ಣ ಆಸ್ಪತ್ರೆ ಹಿಂಭಾಗವಿರುವ ಪೌರಕಾರ್ಮಿಕರ ಮನೆಗೆ ಭೇಟಿ ನೀಡಿ ಪೌರ ಕಾರ್ಮಿಕ ದಂಪತಿಗಳಾದ ಚಂದ್ರು ಹಾಗೂ ಅಶ್ವಿನಿ ಅವರಿಗೆ ಪಾದ ಪೂಜೆ ಸಲ್ಲಿಸಿದರು. ನಂತರ, ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು.

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ರಾಜ್ಯ ಸರ್ಕಾರದಿಂದ ವರ್ಗಾವಣೆ ದಂಧೆ ನಡೆಸಲಾಗುತ್ತಿದೆ. 8-9 ತಿಂಗಳ ಅಧಿಕಾರಾವಧಿಯಲ್ಲಿ ಜಿಲ್ಲೆಯ ಜನರು ಅಭಿವೃದ್ಧಿ ಕಾಣದೆ ನೊಂದಿದ್ದಾರೆ. ಇದಕ್ಕೆ ಸೂಕ್ತ ಉತ್ತರ ಕೊಡುವ ಸಮಯ ಬಂದಿದೆ. ಅದಕ್ಕಾಗಿ ಹಾಸನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ಕರೆ ನೀಡಿದರು. ಹಾಸನದಲ್ಲಿ ಹಣ, ಹೆಂಡ ಮತ್ತು ಅಧಿಕಾರ ಬಲದಿಂದ ಜಾತಿಯ ವಿಷ ಬೀಜ ಭಿತ್ತಿ ಚುನಾವಣೆ ಗೆಲ್ಲುವ ತಂತ್ರ ನಡೆಸಲಾಗುತ್ತಿದೆ. ಇದಕ್ಕೆ ಈ ಚುನಾವಣೆಯಲ್ಲಿ ಕಡಿವಾಣ ಹಾಕುವಂತೆ ಒತ್ತಾಯಿಸಿದ ಅವರು, ಈಗಾಗಲೇ ತುಮಕೂರಿನ ಹಾಗೂ ಮಂಡ್ಯ ಜನರು ಕುಟುಂಬ ರಾಜಕಾರಣವನ್ನು ಕೊನೆಗಾಣಿಸಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಶಾಸಕ ಪ್ರೀತಮ್ ಜೆ.ಗೌಡ ಮಾತನಾಡಿ, ಹಾಸನವನ್ನು ಒಂದು ಕುಟುಂಬಕ್ಕೆ ಬರೆದು ಕೊಟ್ಟಿಲ್ಲ. ನಾನು ಕೂಡ ಹಾಸನದ ಗೌಡ. ಎ.ಮಂಜು ಕೂಡ ಹಾಸನದ ಗೌಡರೇ. ನಮ್ಮ ಮನೆಗೆ ಕಲ್ಲು ಹೊಡೆದವರಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿ, ದೇಶದ ಭದ್ರತೆ ಹಿತದೃಷ್ಟಿ ಮತ್ತು ಅಭಿವೃದ್ಧಿಗಾಗಿ ಬಿಜೆಪಿಗೆ ನಿಮ್ಮ ಮತ ನೀಡಿ ಎಂದು ಮನವಿ ಮಾಡಿದರು.

ಅಭ್ಯರ್ಥಿ ಎ.ಮಂಜು ಮಾತನಾಡಿ, ಜೆಡಿಎಸ್ ಅಭ್ಯರ್ಥಿ ವಯಸ್ಸು 27, ಆತನ ಚುನಾವಣಾ ಆದಾಯ ಘೋಷಣೆಯಲ್ಲಿ 20 ಹಸುಗಳನ್ನು ಸಾಕಿರುವುದಾಗಿ ತಿಳಿಸಿದ್ದಾರೆ. ಅವರಿಗೆ 9 ಕೋಟಿ ಆಸ್ತಿ ಇದೆ. ಸಾಲ ಕೊಟ್ಟಿದ್ದಾರೆ. ಯಾವುದೇ ಕೆಲಸ ಮಾಡದೆ ಇಷ್ಟೊಂದು ಹಣ ಅವರಿಗೆ ಎಲ್ಲಿಂದ ಬಂದಿದೆ? ಎಂದು ಪ್ರಶ್ನಿಸಿದರು. ದೇವೇಗೌಡರ ಬಳಿ ಎರಡು ಎಕರೆ ಜಮೀನಿತ್ತು. ಆದರೆ, ಈಗ 45 ಸಾವಿರ ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಆಸ್ತಿ ಎಲ್ಲಿಂದ ಬಂತು? ಮತದಾರರು ಇದನ್ನು ಪರಾಮರ್ಶಿಸಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು. ಈ ವೇಳೆ ಕಡೂರು ಕ್ಷೇತ್ರದ ಶಾಸಕ ಬೆಳ್ಳಿ ಪ್ರಕಾಶ್ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Translate »