ಪುತ್ರನ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ದೇವಿಗೆ ವಿಶೇಷ ಪೂಜೆ
ಮೈಸೂರು

ಪುತ್ರನ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ದೇವಿಗೆ ವಿಶೇಷ ಪೂಜೆ

March 25, 2019

ಮೈಸೂರು: ಚಾಮುಂಡಿಬೆಟ್ಟದಲ್ಲಿ ಇಂದು ರಾಜಕೀಯ ಮುಖಂಡರು, ಅದರಲ್ಲೂ ಚುನಾವಣಾ ಅಭ್ಯರ್ಥಿಗಳದ್ದೇ ಸದ್ದು. ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಮತ್ತವರ ಕುಟುಂಬ, ಬಿಜೆಪಿ ಅಭ್ಯರ್ಥಿ, ಸಂಸದ ಪ್ರತಾಪಸಿಂಹ, ಮೈತ್ರಿ ಪಕ್ಷದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಅವರು ಸೋಮವಾರ ನಾಮಪತ್ರ ಸಲ್ಲಿಕೆಗೂ ಮುನ್ನ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದರ್ಶನ ಪಡೆದು, ಗೆಲುವಿಗೆ ಪ್ರಾರ್ಥಿಸಿದರು.

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ತಮ್ಮ ಪುತ್ರ ನಿಖಿಲ್, ಪತ್ನಿ ಅನಿತಾ ಕುಮಾರಸ್ವಾಮಿ ಅವರೊಂದಿಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಪುತ್ರ ನಿಖಿಲ್ ಹೆಸರಿನಲ್ಲಿ ವಿಶೇಷ ಅರ್ಚನೆಯನ್ನೂ ಮಾಡಿಸಿದರು.

ಇವರೊಂದಿಗೆ ಸಚಿವ ಸಾ.ರಾ.ಮಹೇಶ್, ಮಂಡ್ಯ ಸಂಸದ ಶಿವರಾಮೇಗೌಡ, ಮಾಜಿ ಶಾಸಕ ಕೋನಾರೆಡ್ಡಿ ಇನ್ನಿತರ ಮುಖಂಡರು ಹಾಜರಿದ್ದರು.

ಸಿಎಂ ಕುಮಾರಸ್ವಾಮಿ, ನಿಖಿಲ್ ಚಾಮುಂಡಿಬೆಟ್ಟಕ್ಕೆ ಬರುತ್ತಿದ್ದಂತೆ ಬೆಂಬಲಿಗರು, ಅಭಿಮಾನಿಗಳು ಅವರನ್ನು ಸುತ್ತುವರಿದರು. ಪೊಲೀಸರ ಬಿಗಿ ಬಂದೋಬಸ್ತಿನ ನಡುವೆಯೂ ಬೆಂಬಲಿಗರು ಕುಮಾರಣ್ಣನ ದರ್ಶನಕ್ಕೆ ಮುಗಿ ಬಿದ್ದರು. ಬಳಿಕ ಕುಮಾರಸ್ವಾಮಿ, ವಿಕಾಸ ವಾಹಿನಿ ಪ್ರಚಾರ ರಥಕ್ಕೆ ಪೂಜೆ ಸಲ್ಲಿಸಿದರು. ರಥವೇರಿ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಕೈಬೀಸಿದರು.

ಪತ್ನಿಯೊಂದಿಗೆ ಸಂಸದ ಪ್ರತಾಪಸಿಂಹ ವಿಶೇಷ ಪೂಜೆ: ಮೈಸೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಸಂಸದ ಪ್ರತಾಪಸಿಂಹ ಅವರು ಸೋಮವಾರ ಬೆಳಿಗ್ಗೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ದರು. ಪತ್ನಿ ಅರ್ಪಿತಾಸಿಂಹ ಮತ್ತು ಪುತ್ರಿ ವಿಪಂಚಿ, ಪಕ್ಷದ ಪದಾಧಿಕಾರಿಗಳೊಂದಿಗೆ ಆಗಮಿಸಿದ ಅವರು, ನಾಮ ಪತ್ರವನ್ನು ಚಾಮುಂಡೇಶ್ವರಿ ತಾಯಿಯ ಪದತಲದಲ್ಲಿರಿಸಿ, ಪೂಜೆ ಸಲ್ಲಿಸಿ, ತಮ್ಮ ಗೆಲುವಿಗೆ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗೋಪಾಲ ರಾವ್, ಜಿಲ್ಲಾ ಕಾರ್ಯದರ್ಶಿ ಎನ್.ರಾಜಕುಮಾರ್, ಚಾಮುಂಡೇಶ್ವರಿ ಕ್ಷೇತ್ರ ಬಿಜೆಪಿ ಅಧ್ಯಕ್ಷ ಅರುಣಕುಮಾರ್ ಗೌಡ, ಜಿಲ್ಲಾ ಕಾರ್ಯದರ್ಶಿ ನಂದೀಶ್, ಪದಾಧಿಕಾರಿ ಗಳಾದ ದೇವರಾಜ್, ಈರೇಗೌಡ ಇನ್ನಿತರರು ಹಾಜರಿದ್ದರು.

ಕಾಂಗ್ರೆಸ್ ಅಭ್ಯರ್ಥಿ ಸಿ.ಹೆಚ್.ವಿಜಯಶಂಕರ್: ಮೈಸೂರು-ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಸಹ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪತ್ನಿ ಪುಷ್ಪಾವತಿ, ಪುತ್ರಿ ಕನಕಲಕ್ಷ್ಮಿ ಅವರೊಂದಿಗೆ ಬೆಟ್ಟಕ್ಕೆ ಆಗಮಿಸಿದ ಅವರು ತಮ್ಮ ಗೆಲುವಿಗೆ ದೇವಿಯನ್ನು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಪಕ್ಷದ ಹಲವು ಪ್ರಮುಖ ಮುಖಂಡರು ಹಾಜರಿದ್ದರು.

Translate »