ಅಧ್ಯಕ್ಷ ಸ್ಥಾನಕ್ಕೆ ಕಸರತ್ತು: ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯೇ ಇಲ್ಲ
ಚಾಮರಾಜನಗರ,ಮಾ.13-ಚಾ.ನಗರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸುತ್ತಿದ್ದಂತೆ ಜಿಲ್ಲೆಯ ಸ್ಥಳೀಯ ಸಂಸ್ಥೆಯಲ್ಲಿ ರಾಜ ಕೀಯ ಚಟುವಟಿಕೆಗಳು ಗರಿಗೆದರಿವೆ.
ಚಾ.ನಗರ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ `ಬಿ’ ಮಹಿಳೆಗೆ ಮೀಸ ಲಿರಿಸಲಾಗಿದೆ. ಆದರೆ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿರುವು ದರಿದ ಅಭ್ಯರ್ಥಿಗಳ ನಡುವೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಶುರುವಾಗಿದ್ದು, ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಅಭ್ಯರ್ಥಿಯೂ ಇಲ್ಲದಿರು ವುದರಿಂದ ಹೊಸದಾಗಿ ಮೀಸಲಾತಿ ನಿಗದಿಯಾಗಲಿದೆ ಎನ್ನಲಾಗಿದೆ.
ಒಟ್ಟು 31 ಸದಸ್ಯ ಬಲದ ಇಲ್ಲಿನ ನಗರ ಸಭೆಯ ಅಧಿಕಾರದ ಚುಕ್ಕಾಣಿ ಹಿಡಿಯಲು ಯಾವುದೇ ಪಕ್ಷಕ್ಕೆ 16 ಸದಸ್ಯರ ಸಂಖ್ಯಾ ಬಲಬೇಕು. ಸಂಸದರು ಹಾಗೂ ಕ್ಷೇತ್ರದ ಶಾಸಕರು ಮತ ಚಲಾಯಿಸುವುದರಿಂದ ಅಧಿಕಾರಕ್ಕಾಗಿ 17 ಸದಸ್ಯರ ಬಲ ಬೇಕು. ಒಟ್ಟಾರೆ ಈ ಸಂಖ್ಯಾಬಲವನ್ನು ಯಾವುದೇ ಪಕ್ಷ ಹೊಂದಿಲ್ಲ. ಬಿಜೆಪಿ 15 ಸದಸ್ಯರನ್ನು ಹೊಂದಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಇನ್ನೂ ಕಾಂಗ್ರೆಸ್ 8 ಸ್ಥಾನ ಗಳಲ್ಲಿ ಗೆದ್ದಿದ್ದರೇ, ಎಸ್‍ಡಿಪಿಐ 6, ಬಿಎಸ್‍ಪಿ 1, ಮತ್ತೊಂದು ಸ್ಥಾನದಲ್ಲಿ ಪಕ್ಷೇತರ ಸದಸ್ಯ ಗೆಲುವು ಸಾಧಿಸಿದ್ದು, ಪ್ರಸ್ತುತ ಯಾವ ಪಕ್ಷಗಳ ನಡುವೆ ಹೊಂದಾಣಿಕೆ ನಡೆಯ ಲಿದೆ ಎಂಬುದು ಇನ್ನೂ ನಿಗೂಢವಾಗಿದ್ದು, ಯಾರು ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ನಗರಸಭೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ನಗರಸಭೆ ಅಧಿಕಾರ ಹಿಡಿಯಲು ಹೆಚ್ಚಿನ ಅವಕಾಶ ವಿದೆ. 15 ಚುನಾಯಿತ ಸದಸ್ಯರು ಹಾಗೂ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಒಟ್ಟು ಬಿಜೆಪಿ 16 ಸಂಖ್ಯಾಬಲ ಹೊಂದಿದ್ದು, ಅಧಿಕಾರ ಹಿಡಿಯಲು ಬಿಜೆಪಿಗೆ ಒಬ್ಬ ಸದಸ್ಯರ ಬೆಂಬಲ ಬೇಕಾಗಿದೆ. ಇದಕ್ಕಾಗಿ ಬಿಜೆಪಿ ಪಕ್ಷದ ಜಿಲ್ಲಾ ಮುಖಂಡರು ಹಾಗೂ ನಗರಸಭೆ ಸದಸ್ಯರು ಬಿಎಸ್‍ಪಿ ಸದಸ್ಯ ಪ್ರಕಾಶ್ ಹಾಗೂ ಪಕ್ಷೇತರ ಸದಸ್ಯ ಬಸವಣ್ಣ ಅವರುಗಳ ಬೆಂಬಲ ಪಡೆಯಲು ಕಸರತ್ತು ಆರಂಭಿಸಿ ದ್ದಾರೆ. ಈ ಇಬ್ಬರಲ್ಲಿ ಒಬ್ಬರನ್ನು ತಮ್ಮ ತೆಕ್ಕೆಗೆ ಹಾಕಿ ಕೊಳ್ಳುವ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಬಿಎಸ್‍ಪಿ ಹಾಗೂ ಪಕ್ಷೇತರ ಸದಸ್ಯ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಬಿಜೆಪಿ ಅಧಿಕಾರ ಹಿಡಿಯುವುದು ನಿರ್ಧಾರವಾಗಲಿದೆ.
ಇನ್ನೂ ಕಾಂಗ್ರೆಸ್ ಅಧಿಕಾರ ಹಿಡಿಯ ಬೇಕಾದರೆ ಎಸ್‍ಡಿಪಿಐ, ಬಿಎಸ್‍ಪಿ ಹಾಗೂ ಪಕ್ಷೇತರ ಸದಸ್ಯರ ಬೆಂಬಲ ಪಡೆದರೆ ಮಾತ್ರ ಸಾಧ್ಯವಾಗಲಿದೆ. ಈ ಎಲ್ಲರೂ ಒಗ್ಗೂಡಿದರೆ ಸಂಖ್ಯಾಬಲ 16 ಆಗಲಿದ್ದು, (ಕಾಂಗ್ರೆಸ್-8, ಎಸ್‍ಡಿಪಿಐ-6, ಬಿಎಸ್‍ಪಿ-1, ಪಕ್ಷೇತರ-1) ಸ್ಥಳೀಯ ಶಾಸಕ ಸಿ.ಪುಟ್ಟ ರಂಗಶೆಟ್ಟಿ ಮತ ಚಲಾಯಿಸುವ ಅಧಿಕಾರ ಹೊಂದಿರುವುದರಿಂದ ಕಾಂಗ್ರೆಸ್ ಸಂಖ್ಯಾ ಬಲ 17 ಆಗುಲಿದ್ದು ಅಧಿಕಾರ ಹಿಡಿಯ ಬಹುದಾಗಿದೆ. ಎಸ್‍ಡಿಪಿಐ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂಬುದು ಸ್ಟಷ್ಟ ವಾಗಿರುವುದರಿಂದ ಕಾಂಗ್ರೆಸ್ ಅಧಿಕಾರದ ಆಸೆ ಇಮ್ಮಡಿಯಾಗಿದೆ. ಒಟ್ಟಾರೆ ಎಸ್‍ಡಿ ಪಿಐ, ಬಿಎಸ್‍ಪಿ ಹಾಗೂ ಪಕ್ಷೇತರ ಸದಸ್ಯರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಕಾಂಗ್ರೆಸ್ ಅಧಿಕಾರಕ್ಕೇರುವುದು ನಿರ್ಧಾರವಾಗಲಿದೆ.
ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ `ಬಿ’ ಮಹಿಳೆಗೆ ಮೀಸಲಾಗಿದೆ. ಈ ವರ್ಗಕ್ಕೆ ಸೇರಿ ರುವ ಯಾವ ಸದಸ್ಯರೂ ನಗರ ಸಭೆಯಲ್ಲಿ ಗೆಲುವು ಸಾಧಿಸಿಲ್ಲ. ಹೀಗಾಗಿ ಮೀಸಲಾತಿ ಬದಲಾ ವಣೆಗೆ ಜಿಲ್ಲಾಡಳಿತ ಪತ್ರ ಬರೆಯಲಿದೆ. ಈ ಸ್ಥಾನಕ್ಕೆ ಮೀಸಲಾತಿ ನಿಗದಿ ಆದ ನಂತರ ಮತ್ತಷ್ಟು ರಾಜಕೀಯ ಚಟುವಟಿಕೆಗಳು ಚುರುಕುಗೊಳ್ಳಲಿವೆ. ಅಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿಗೊಂಡ ನಂತರ ಸ್ಥಳೀಯ ರಾಜಕೀಯ ಚಟುವಟಿಕೆ ಮತ್ತಷ್ಟು ಬಿರುಸು ಗೊಳ್ಳುವುದನ್ನು ತಳ್ಳಿ ಹಾಕುವಂತಿಲ್ಲ.
ಸಿದ್ದಲಿಂಗಸ್ವಾಮಿ