ಚಾಮರಾಜನಗರ: ನಗರದ ಬಿ.ರಾಚಯ್ಯ ಜೋಡಿರಸ್ತೆ ಅಭಿವೃದ್ಧಿ ಕಾಮಗಾರಿ ಸ್ಥಗಿತವಾಗಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವುವರು ಇನ್ನೂ ಧೂಳಿನಿಂದ ಮುಕ್ತರಾಗಿಲ್ಲ.
ನಗರದ ಭುವನೇಶ್ವರಿ ವೃತ್ತದಿಂದ ರಾಮ ಸಮುದ್ರದ ನೀರು ಶುದ್ಧೀಕರಣ ಘಟಕ ದವರೆಗಿನ 3.1 ಕಿ.ಮೀ ಉದ್ದದ ಏಕೈಕ ಜೋಡಿರಸ್ತೆಯನ್ನು 36 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿ ವೃದ್ಧಿಗೊಳಿಸಲಾಗುತ್ತಿದೆ. ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದರೂ ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ.
ಭುವನೇಶ್ವರಿ ವೃತ್ತದಿಂದ ರಾಮಸಮು ದ್ರದವರೆಗೆ ಎಡ ಬದಿಯನ್ನು (ನ್ಯಾಯಾಲಯದಲ್ಲಿ ಪ್ರಕರಣ ಇರು ವುದನ್ನು ಹೊರತುಪಡಿಸಿ) ಅಭಿವೃದ್ಧಿ ಗೊಳಿಸಲಾಗಿದೆ. ಬಲ ಭಾಗದ ಕಾಮ ಗಾರಿ ಆರಂಭವಾಗಿ ಹಲವು ತಿಂಗಳಾದರೂ ಇನ್ನೂ ಪೂರ್ಣಗೊಂಡಿಲ್ಲ. ಭುವನೇಶ್ವರಿ ವೃತ್ತದಿಂದ ರಾಮಸಮುದ್ರದ ಅಂಬೇಡ್ಕರ್ ಪ್ರತಿಮೆವರೆಗೆ ಮಾತ್ರ ಒಂದು ಲೈನರ್ ಕೆಲಸ ಆಗಿದೆ. ಇನ್ನೂ ಎರಡು ಲೈನರ್ ಕೆಲಸ ಆಗಬೇಕಾಗಿದ್ದು, ಕಾಮಗಾರಿ ತೀರಾ ಮಂದಗತಿಯಲ್ಲಿ ಸಾಗಿದೆ. ವರ್ತಕರ ಭವನದ ಮುಂಭಾಗ ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯ ದಿಂದ ಕಾಂಕ್ರಿಟ್ ಹಾಕುವ ಯಂತ್ರ ನಿಂತಲ್ಲೇ ನಿಂತಿರುವುದು ಕಾಮಗಾರಿ ಸ್ಥಗಿತ ಗೊಂಡಿರುವುದಕ್ಕೆ ನಿದರ್ಶನವಾಗಿದೆ.
ಭುವನೇಶ್ವರಿ ವೃತ್ತದಿಂದ ರಾಮಸಮು ದ್ರದವರೆಗೆ ಎರಡು ಲೈನರ್‍ನಲ್ಲಿ ಕಾಂಕ್ರಿಟ್ ಹಾಕಲು ಯಾವುದೇ ಸಮಸ್ಯೆ ಇಲ್ಲ. ಆದರೂ ಕಾಮಗಾರಿ ನಡೆಯುತ್ತಿಲ್ಲ. ಆದರೆ ಗುತ್ತಿಗೆದಾರರಿಗೆ ಹಣ ಬಿಡುಗಡೆಯಾಗ ದಿರುವುದಕ್ಕೆ ಕೆಲಸ ಸ್ಥಗಿತವಾಗಿದೆ ಎಂಬ ಮಾಹಿತಿ ‘ಮೈಸೂರು ಮಿತ್ರ’ನಿಗೆ ಲಭ್ಯ ವಾಗಿದೆ. ಭುವನೇಶ್ವರಿ ವೃತ್ತದಿಂದ ಆರಂಭ ವಾಗಿರುವ ರಸ್ತೆ ವಿಭಜಕ ಕಾಮಗಾರಿ (ಡಿವೈಡರ್) ಪ್ರಗತಿಯಲ್ಲಿದ್ದು, ಜೋಡಿರಸ್ತೆ ಕಾಮಗಾರಿ ಪೂರ್ಣಗೊಳಿಸಲು 11 ತಿಂಗ ಳುಗಳ ಸಮಯಾವಕಾಶ ನೀಡಲಾಗಿತ್ತು. ಈ ಸಮಯ ಮುಕ್ತಾಯವಾಗಿದ್ದು, ಶೇ. 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಬಾಕಿ ಇರುವ ಕಾಮಗಾರಿ ಪ್ರಗತಿಯಲ್ಲಿದೆ. ನ್ಯಾಯಾಲಯದಲ್ಲಿರುವ ಪ್ರಕರಣದ ಜಾಗ ಹೊರತುಪಡಿಸಿ ಉಳಿದೆಲ್ಲಾ ಕಡೆ ಅಭಿ ವೃದ್ಧಿ ಕಾಮಗಾರಿ ನಡೆಸುವುದಾಗಿ ಅಧಿ ಕಾರಿಗಳು ತಿಳಿಸಿದ್ದಾರೆ.
ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಸಕಲೇಶಪುರದ ಬಳಿಯ ಶಿರಾಡಿಘಾಟ್‍ನ 13ರಿಂದ 14 ಕಿಮೀ ಉದ್ದದ ರಸ್ತೆಯನ್ನು ಕೇವಲ 5-6 ತಿಂಗಳೊಳಗೆ ಕಾಂಕ್ರಿಟ್ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲಾಗಿದೆ. ಆದರೆ ನಗರದ 3 ಕಿಲೋ ಮೀಟರ್ ಉದ್ದದ ಜೋಡಿರಸ್ತೆ ಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿ ಆರಂಭವಾಗಿ ವರ್ಷ ಕಳೆದರೂ ಪೂರ್ಣ ಗೊಳ್ಳದಿರುವುದು ಇಲ್ಲಿನ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ. ಇದನ್ನು ಜನಪ್ರತಿನಿಧಿಗಳು ಗಂಭೀರವಾಗಿ ಪರಿಗಣಿ ಸಿಲ್ಲ ಎಂಬ ಆರೋಪ ಸಾರ್ವಜನಿ ಕರದ್ದು. ಸ್ಥಗಿತವಾಗಿರುವ ಕಾಂಕ್ರಿಟ್ ಹಾಕುವ ಕೆಲಸ ಆರಂಭವಾಗಬೇಕು. ಮಂದಗತಿಯಲ್ಲಿ ಸಾಗಿರುವ ಇತರ ಕಾಮಗಾರಿಗಳು ಚುರುಕುಗೊಳ್ಳಬೇಕು. ಬೇಗ ಕಾಮಗಾರಿ ಪೂರ್ಣಗೊಂಡು ಧೂಳಿನಿಂದ ಮುಕ್ತ್ತಿ ದೊರಕುವಂತೆ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.