ಮೋದಿಗಿಂತ ಮನಮೋಹನ್ ಸಿಂಗ್ ಆಡಳಿತವೇ ಉತ್ತಮ: ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಭಿಮತ
ಮಂಡ್ಯ

ಮೋದಿಗಿಂತ ಮನಮೋಹನ್ ಸಿಂಗ್ ಆಡಳಿತವೇ ಉತ್ತಮ: ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಅಭಿಮತ

October 29, 2018

ಮಂಡ್ಯ: ಕೇಂದ್ರದ ಮೋದಿ ನೇತೃತ್ವದ ಸರ್ಕಾರ ಶ್ರೀಮಂತರ ಪರ ಇದೆ. ಮೋದಿಗೆ ಹೋಲಿಸಿದರೆ ಯುಪಿಎ ಸರ್ಕಾರದಲ್ಲಿ ಮನಮೋಹನ್ ಸಿಂಗ್ ಅವರು ಉತ್ತಮ ಆಡಳಿತ ನೀಡಿದ್ದಾರೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜನರನ್ನು ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಆರ್‍ಟಿಐ, ಆಧಾರ್ ಕಾರ್ಡ್ ಜಾರಿ ಮಾಡುವ ಮಹತ್ವದ ನಿರ್ಧಾರ ತೆಗೆದು ಕೊಂಡಿದ್ದರು. ಆದರೆ, ಬಿಜೆಪಿ ಸರ್ಕಾರ ಜನರ ಹಿತಕಾಯುವ ಒಂದು ಯೋಜನೆಯನ್ನು ಜಾರಿಗೊಳಿಸಿಲ್ಲ ಎಂದು ಟೀಕಿಸಿದರು.

ಅಡುಗೆ ಅನಿಲ ಬೆಲೆ ಹೆಚ್ಚಳವಾಗಿದ್ದ ಸಂದರ್ಭದಲ್ಲಿ ಸಂಸದರಾದ ಶೋಭಾ ಕರಂದ್ಲಾಜೆ, ಅನಂತ ಕುಮಾರ್, ನವೀನ್ ಕುಮಾರ್ ಕಟಿಲು ಅವರು ಸಿಲಿಂಡರ್ ಹೊತ್ತುಕೊಂಡು ಪ್ರತಿಭಟನೆ ಮಾಡಿ ಜನ ಸಾಮಾನ್ಯರ ಪರ ಕೆಲಸ ಮಾಡಿದರು. ಆದರೆ ಈಗೇಕೆ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ದರ ದುಪ್ಪಟ್ಟಾದರೂ ಮೌನವಾಗಿದ್ದಾರೆ? ಎಂದು ಪ್ರಶ್ನೆಸಿದರು.

ಪ್ರಧಾನ ಮಂತ್ರಿಗಳು ದೇಶದಲ್ಲಿ ಯಾವುದೇ ದೊಡ್ಡ ಸಮಸ್ಯೆ ಬಂದಾಗಲೂ ಹೊರ ದೇಶಕ್ಕೆ ಪ್ರವಾಸಕ್ಕೆ ಹೋಗಿ ಫೋಟೋ ತೆಗೆಸಿಕೊಳ್ಳುತ್ತಾರೆ. ರೆಫಲ್ ಹಗರಣ, ಸಿಬಿಐನಲ್ಲಿ ನಡೆದಿರುವ ಗೊಂದಲ ಸಮಸ್ಯೆಗಳಿಗೆ ಉತ್ತರಿಸಬೇಕಾದ ಪ್ರಧಾನಿ ಈಗ ಜಪಾನ್‍ಗೆ ಹೋಗಿದ್ದಾರೆ. ಕೇವಲ ಪಲಾಯನವಾದ ಮಾಡಿಕೊಂಡೇ ನಾಲ್ಕೂವರೆ ವರ್ಷ ಕಳೆದರು ಎಂದು ಟೀಕಿಸಿದರು.

ರೈತರ ಆತ್ಮಹತ್ಯೆಗೆ ಸಾಂತ್ವನ ಕೂಡ ಇಲ್ಲ: ದೇಶದಲ್ಲಿ ರೈತ ಆತ್ಮಹತ್ಯೆಗಳು ನಿರಂತರವಾಗಿ ನಡೆದರೂ ಸೌಜನ್ಯಕ್ಕೂ ಪ್ರಧಾನಿ ಮೋದಿ ಅವರು ಒಂದು ಸಾಂತ್ವನದ ಮಾತುಗಳನ್ನೂ ಹೇಳುವ ಗೋಜಿಗೆ ಹೋಗಿಲ್ಲ. ಅವರಿಗೆ ರೈತರಿಗಿಂತ ಉದ್ಯಮಿಗಳ ಹಿತ ಕಾಯುವುದು ಮುಖ್ಯವಾಗಿದೆ. ದೇಶದ ಹಣವನ್ನು ಲೂಟಿ ಮಾಡುವ ಉದ್ಯಮಿಗಳಿಗೆ ಎಲ್ಲಾ ರೀತಿ ಸಹಕಾರ ನೀಡುವ ಮೋದಿ ರೈತರಿಗಾಗಿ ಮಾಡಿದ್ದೇನು? ಎಂದು ಪ್ರಶ್ನಿಸಿದರು.

ಪೆಟ್ರೋಲ್, ಡಿಸೇಲ್, ಅಡುಗೆ ಅನಿಲದ ಬೆಲೆ ಗಗನಕ್ಕೆ ಏರಿದೆ. ಆರೋಗ್ಯ ಕಾರ್ಡ್ ನೀಡುವ ಭರವಸೆ ಇನ್ನೂ ಈಡೇರದೆ ಬಡವರು ತತ್ತರಿಸುವಂತಾಗಿದೆ. 2016ರ ನೋಟ್ ಬ್ಯಾನ್‍ನಿಂದ ಬಡವರು, ಮಧ್ಯಮ ವರ್ಗದ ಜನರು, ವ್ಯಾಪಾರಸ್ಥರು ತತ್ತರಿಸಿದರು. ಆದರೆ ಪ್ರಧಾನ ಮಂತ್ರಿಗಳು ಜನ ಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸದೇ ದೊಡ್ಡ ಉದ್ಯಮಿಗಳ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಮೂರು ಲೋಕಸಭಾ ಕ್ಷೇತ್ರಗಳಿಗೆ ಈಗ ಉಪ ಚುನಾವಣೆ ಅಗತ್ಯವೇ ಇರಲಿಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಆಲೋಚನೆ ಮಾಡಲಿಲ್ಲ. ಮೂರು ತಿಂಗಳಿಗೋಸ್ಕರ ಚುನಾವಣೆ ಮಾಡಿದರೆ ಆಗುವ ಲಾಭ ಏನು? ಎಂದು ಪ್ರಶ್ನೆ ಮಾಡಿದ ಅವರು, ಮುಂದಿನ ಏಪ್ರಿಲ್, ಮೇನಲ್ಲಿ ಉತ್ತರ ಭಾರತದಲ್ಲಿ ಬಿಸಿಲು ಇರುತ್ತದೆ. ಹೀಗಾಗಿ ಉತ್ತರ ಭಾರತದ ಹಲವಾರು ರಾಜ್ಯಗಳು ಫೆಬ್ರವರಿ ತಿಂಗಳಲ್ಲೇ ಲೋಕಸಭೆಗೆ ಚುನಾವಣೆ ನಡೆಸುವಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಮನವಿ ಮಾಡಿವೆ. ಇದರಿಂದಾಗಿ ಕೇವಲ ಮೂರು ತಿಂಗಳಿಗೆ ಉಪ ಚುನಾವಣೆ ನಡೆಸಿದರೆ ಸರ್ಕಾರದ ಹಣವೂ ಖರ್ಚು ಜನರ ಶ್ರಮವೂ ವ್ಯರ್ಥವಾಗುತ್ತದೆ ಎಂದರು.

ಮಂಡ್ಯ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಎಲ್ಲಾ ಉಪ ಚುನಾವಣೆಗಳಲ್ಲಿ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಅಭ್ಯರ್ಥಿಗಳು ಗೆಲ್ಲುತ್ತಾರೆ. ಜನ ಪರ, ರೈತರ ಪರ ಕಾಳಜಿ ಹೊಂದಿರುವ ಕುಮಾರಸ್ವಾಮಿ ಅವರ ಆಡಳಿತಕ್ಕೆ ಮೆಚ್ಚಿ ಜನ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಎಂ. ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಡಿ.ರಮೇಶ್ ಇದ್ದರು.

Translate »