ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ಯಶಸ್ವಿ
ಚಾಮರಾಜನಗರ, ಮೈಸೂರು

ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ಯಶಸ್ವಿ

June 26, 2019

ಚಾಮರಾಜನಗರ, ಜೂ.25 (ಎಸ್‍ಎಸ್)- ಗುಂಡ್ಲುಪೇಟೆಯಲ್ಲಿ ಯುವಕನ ಬೆತ್ತಲೆ ಮೆರವಣಿಗೆ ಹಾಗೂ ಸಂತೇಮರಹಳ್ಳಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣವನ್ನು ಎಸ್‍ಐಟಿ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ಆಗ್ರಹಿಸಿ ಪ್ರಗತಿಪರ ಮತ್ತು ದಲಿತ ಸಂಘಟನೆ ಗಳ ಒಕ್ಕೂಟ ಮಂಗಳವಾರ ಕರೆ ನೀಡಿದ್ದ ಚಾಮರಾಜನಗರ ಸ್ವಯಂ ಪ್ರೇರಿತ ಬಂದ್ ಸಂಪೂರ್ಣ ಯಶಸ್ವಿಯಾಯಿತು.

ಬಂದ್‍ಗೆ ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿದ್ದ ಕಾರಣ ಅಂಗಡಿ-ಮುಂಗಟ್ಟು ಗಳು ಬಾಗಿಲು ಮುಚ್ಚಿದ್ದವು. ಇದರಿಂದ ಜನನಿಬಿಡ ಪ್ರದೇಶಗಳಾದ ದೊಡ್ಡ ಮತ್ತು ಚಿಕ್ಕ ಅಂಗಡಿ ಬೀದಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಹೋಟೆಲ್‍ಗಳು, ಕ್ಯಾಂಟಿನ್ ಗಳೂ ಬಂದ್ ಆಗಿದ್ದವು. ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ಬಸ್ ಸಂಚಾರ ಮುಂಜಾನೆ ಆರಂಭಗೊಂಡರೂ ಬೆ.9ಗಂಟೆಯ ನಂತರ ಸ್ಥಗಿತಗೊಂಡಿತು. ಹೀಗಾಗಿ ಪ್ರಯಾಣಿಕರು ಪರದಾಡುವಂತಾಯಿತು. ಮುಂಜಾಗ್ರತಾ ಕ್ರಮವಾಗಿ ಕೆಲವು ಖಾಸಗಿ ಶಾಲಾ-ಕಾಲೇಜುಗಳಿಗೆ

ರಜೆ ಘೋಷಿಸಲಾಗಿತ್ತು. ಬಾಗಿಲು ತೆರೆದು ತರಗತಿ ನಡೆಸಲು ಮುಂದಾದ ಕೆಲವು ಶಾಲಾ-ಕಾಲೇಜುಗಳಿಗೆ ಪ್ರತಿಭಟನಾಕಾರರು ತೆರಳಿ ಬಾಗಿಲು ಮುಚ್ಚಿಸುವಲ್ಲಿ ಯಶಸ್ವಿ ಯಾದರು. ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‍ಗಳು ಬಾಗಿಲು ತೆರೆಯುತ್ತಿದ್ದಂತೆಯೇ ಅಲ್ಲಿಗೆ ತೆರಳಿದ ಪ್ರತಿಭಟನಾಕಾರರು, ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಬಂದ್‍ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು. ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿ ತಮ್ಮ ಕರ್ತವ್ಯ ಹಾಗೂ ವಹಿವಾಟುಗಳನ್ನು ಸ್ಥಗಿತಗೊಳಿಸಿದರು.

ಪೆಟ್ರೋಲ್ ಬಂಕ್‍ಗಳು ಕಾರ್ಯ ನಿರ್ವಹಿಸಲಿಲ್ಲ. ಹೀಗಾಗಿ ಪೆಟ್ರೋಲ್-ಡೀಸೆಲ್ ಹಾಕಿಸಿಕೊಳ್ಳಲು ಆಗಮಿಸಿದ ವಾಹನ ಸವಾರರು ವಾಪಸ್ ತೆರಳುತ್ತಿದ್ದ ದೃಶ್ಯ ಕಂಡು ಬಂತು. ಚಿತ್ರ ಮಂದಿರಗಳು ದಿನದ ಮೊದಲ ಎರಡು ಪ್ರದರ್ಶನಗಳನ್ನು ರದ್ದುಗೊಳಿಸಿದ್ದವು. ಆಟೋ, ಟ್ಯಾಕ್ಸಿ, ಕಾರುಗಳ ಸಂಚಾರ ವಿರಳವಾಗಿತ್ತು. ಸಾರ್ವಜನಿಕರ ಓಡಾಟವೂ ಕಡಿಮೆ ಇದ್ದದ್ದು ಕಂಡು ಬಂತು. ಒಟ್ಟಾರೆ ಸ್ವಯಂ ಪ್ರೇರಿತ ಬಂದ್‍ಗೆ ಎಲ್ಲರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೃಹತ್ ಪ್ರತಿಭಟನೆ: ಬಂದ್ ಹಿನ್ನಲೆಯಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಶ್ರೀಚಾಮರಾಜೇಶ್ವರ ಉದ್ಯಾನವನದಿಂದ ಆರಂಭವಾದ ಮೆರವಣಿಗೆ ಭುವನೇಶ್ವರಿ ವೃತ್ತಕ್ಕೆ ಆಗಮಿಸಿತು. ಅಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಾನವ ಸರಪಳಿ ನಿರ್ಮಿಸುವ ಮೂಲಕ ಯುವಕನ ಬೆತ್ತಲೆ ಮೆರವಣಿಗೆ ಹಾಗೂ ಜೋಡಿ ಕೊಲೆ ಪ್ರಕರಣವನ್ನು ಖಂಡಿಸಲಾಯಿತು. ನಂತರ ಮೆರವಣಿಗೆಯು ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಗುಂಡ್ಲುಪೇಟೆ ವೃತ್ತ, ದೊಡ್ಡ ಅಂಗಡಿ ಬೀದಿ, ಚಿಕ್ಕ ಅಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ಡಿವಿಯೇಷನ್ ರಸ್ತೆ, ಭುವನೇಶ್ವರಿ ವೃತ್ತ, ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿತು. ಅಲ್ಲಿ ಸ್ವಲ್ಪ ಸಮಯ ಧರಣಿ ನಡೆಸಿದ ನಂತರ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ.ಆನಂದ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಗುಂಡ್ಲುಪೇಟೆ ತಾಲೂಕಿನಲ್ಲಿ ನಡೆದಿರುವ ದಲಿತ ಯುವಕನ ಬೆತ್ತಲೆ ಮೆರವಣಿಗೆ ಹಾಗೂ ಸಂತೇಮರಹಳ್ಳಿಯಲ್ಲಿ ನಡೆದಿರುವ ಜೋಡಿ ಕೊಲೆ ಪ್ರಕರಣಗಳನ್ನು ಎಸ್‍ಐಟಿ ಅಥವಾ ಸಿಬಿಐ ತನಿಖೆಗೆ ವಹಿಸಬೇಕು. ಈ ಮೂಲಕ ಆ ಕುಟುಂಬಗಳಿಗೆ ನ್ಯಾಯ ದೊರಕಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ, ದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ಮುಖಂಡರಾದ ಅಣಗಳ್ಳಿ ಬಸವರಾಜು, ಕೆ.ಎಂ.ನಾಗರಾಜು, ಸಿ.ಕೆ.ಮಂಜುನಾಥ್, ಅರಕಲವಾಡಿ ನಾಗೇಂದ್ರ, ಸಿ.ಎನ್. ಗೋವಿಂದರಾಜು, ಸುಭಾಷ್ ಮಾಡ್ರಳ್ಳಿ, ರಾಮಸಮುದ್ರ ಸುರೇಶ್, ದೊಡ್ಡರಾಯಪೇಟೆ ಅಂಬರೀಷ್, ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾಯಣ, ಮಹೇಶ್ ಕುದರ್, ಸಿ.ಕೆ.ರವಿಕುಮಾರ್, ಶೇಖರ್ ಬುದ್ಧ, ಶ್ರೀನಿವಾಸ್ ಮಂಡ್ಯ, ಸಿ.ಎಂ.ಶಿವಣ್ಣ, ನಟರಾಜು ಮಾಳಿಗೆ, ಅಬ್ರಾರ್ ಅಹಮದ್, ಸಮೀವುಲ್ಲಾಖಾನ್, ಎಂ.ಮಹೇಶ್, ಸೈಯದ್ ಆರಿಫ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಇಟ್ಟ ಹಕ್ಕೋತ್ತಾಯಗಳು

  • ಗುಂಡ್ಲುಪೇಟೆ ತಾಲೂಕಿನಲ್ಲಿ ಯುವಕನ ಬೆತ್ತಲೆ ಪ್ರಕರಣದಲ್ಲಿ ತಕ್ಷಣ ಕ್ರಮ ಜರುಗಿಸದೆ ಬೇಜವಾಬ್ದಾರಿತರ ಪ್ರದರ್ಶಿಸಿ, ಕರ್ತವ್ಯ ಲೋಪವೆಸಗಿರುವ ವೃತ್ತ ನಿರೀಕ್ಷಕರು ಮತ್ತು ಡಿವೈಎಸ್ಪಿ ವಿರುದ್ಧ ಕ್ರಮಕೈಗೊಳ್ಳಬೇಕು.
  • ಸಂತ್ರಸ್ತ ಯುವಕನಿಗೆ ಸೂಕ್ತ ಪರಿಹಾರ ಮತ್ತು ಸರ್ಕಾರಿ ಉದ್ಯೋಗ ನೀಡಬೇಕು.
  • ರಾಜ್ಯದ ಯಾವುದೇ ಮೂಲೆಯಲ್ಲಿ ಇಂತಹ ಪ್ರಕರಣಗಳು ನಡೆದರೆ, ಆಯಾಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಹೊಣೆಗಾರರ ನ್ನಾಗಿ ಮಾಡಬೇಕು.
  • ದಲಿತ ದೌರ್ಜನ್ಯ ಪ್ರಕರಣಗಳನ್ನು ತ್ವರಿತವಾಗಿ ವಿಚಾರಣೆ ಮಾಡಿ, ಶಿಕ್ಷೆ ಪ್ರಕಟಿಸಲು ಅನುಕೂಲವಾಗಲು ವಿಶೇಷ ನ್ಯಾಯಾಲಯಗಳನ್ನು ತೆರೆಯಬೇಕು.
  • ದಲಿತರ ಮೇಲಿನ ದೌರ್ಜನ್ಯಕೋರರ ಆಸ್ತಿ ಮುಟ್ಟುಗೋಲಿನ ಕಾಯ್ದೆ ರೂಪಿಸಬೇಕು.
  • ದೌರ್ಜನ್ಯಕ್ಕೊಳಗಾದ ಸಂತ್ರಸ್ತರು ನ್ಯಾಯಾಲಯಗಳಲ್ಲಿ ಖಾಸಗಿ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲು ಕಾನೂನು ಜಾರಿಗೆ ತರಬೇಕು.

Translate »