ಮೃಗಾಲಯದ ಬೃಹತ್ ಅಕ್ವೇರಿಯಂಗೆ ಕಾಯಕಲ್ಪ ನೀಡಲು ನ್ಯೂಜಿಲೆಂಡ್ ಮೂಲದ ಕಂಪನಿ ಆಸಕ್ತಿ
ಮೈಸೂರು

ಮೃಗಾಲಯದ ಬೃಹತ್ ಅಕ್ವೇರಿಯಂಗೆ ಕಾಯಕಲ್ಪ ನೀಡಲು ನ್ಯೂಜಿಲೆಂಡ್ ಮೂಲದ ಕಂಪನಿ ಆಸಕ್ತಿ

June 26, 2019

ಮೈಸೂರು, ಜೂ.25- ಮೈಸೂರಿನ ಮೃಗಾಲಯದ ಆವರಣದಲ್ಲಿ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬೃಹತ್ ಅಕ್ವೇರಿಯಂಗೆ ಕಾಯಕಲ್ಪ ನೀಡಲು ನ್ಯೂಜಿಲೆಂಡ್ ಮೂಲದ ಕಂಪನಿಯೊಂದು ಮುಂದೆ ಬಂದಿದೆ. ಅಂತಾರಾಷ್ಟ್ರೀಯ ಗುಣಮಟ್ಟದ ಮತ್ಸ್ಯಾಲಯ ಕಾಮಗಾರಿ ಪೂರ್ಣಗೊಳಿಸಲು ಸರ್ಕಾರದ ಅನುಮೋದನೆಗಾಗಿ ಮೃಗಾಲಯ ಪ್ರಾಧಿಕಾರ ಪ್ರಸ್ತಾವನೆ ಕಳುಹಿಸಿದೆ.

ಮೈಸೂರಿಗೆ ಬರುವ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ 2010-11ನೇ ಸಾಲಿನಲ್ಲಿ ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಬೃಹತ್ ಮತ್ಸ್ಯಾಗಾರದ ಕಾಮಗಾರಿ ಆರಂಭಿಸಿತ್ತು. 4.26 ಕೋಟಿ ರೂ. ವೆಚ್ಚದಲ್ಲಿ ಆರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಅಕ್ವೇರಿಯಂ ಕಟ್ಟಡ ನಿರ್ಮಿಸಿತ್ತು. ಆದರೆ ಕಾಮಗಾರಿ ಪೂರ್ಣ ಗೊಳಿಸಲು 30 ಕೋಟಿ ರೂ. ವೆಚ್ಚವಾಗಲಿದೆ ಎಂಬು ದನ್ನು ಅರಿತ ಬಳಿಕ ಅನುದಾನ ಬಿಡುಗಡೆಗೆ ಪಾಲಿಕೆ ಹಾಗೂ ಮೃಗಾಲಯದ ನಡುವೆ ತಿಕ್ಕಾಟ ಉಂಟಾ ಗಿತ್ತು. ಇದರಿಂದಾಗಿ ಆರು ವರ್ಷದಿಂದ ಅಕ್ವೇರಿಯಂ ಕಟ್ಟಡ ಪಾಳು ಬಿದ್ದ ಸ್ಥಿತಿಯಲ್ಲಿತ್ತು. 2018ರ ಜುಲೈ 1ರಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಶಾಸಕ ಎಸ್.ಎ.ರಾಮದಾಸ್ ಹಾಗೂ ಪಾಲಿಕೆ ಮತ್ತು ಮೃಗಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ಕಟ್ಟಡವನ್ನು ಮೃಗಾಲಯಕ್ಕೆ ಹಸ್ತಾಂತರಿ ಸುವಂತೆ ಸೂಚನೆ ನೀಡಿದ್ದರು. ಅದರಂತೆ ಜು.14 ರಂದು ಮತ್ಸ್ಯಾಗಾರದ ಕಟ್ಟಡವನ್ನು ಮೃಗಾಲಯಕ್ಕೆ ಹಸ್ತಾಂತರಿಸಲಾಗಿತ್ತು. ಮೃಗಾಲಯದ ಅಧಿಕಾರಿಗಳು ಮತ್ಸ್ಯಾಗಾರದ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಮಾಹಿತಿ ಕಲೆ ಹಾಕಿದ್ದರು.

ನ್ಯೂಜಿಲೆಂಡ್ ತಾಂತ್ರಿಕತೆ: ಅರ್ಧಕ್ಕೆ ನಿಂತಿರುವ ಕಟ್ಟಡದಲ್ಲಿಯೇ ಅಂತಾರಾಷ್ಟ್ರೀಯ ಗುಣಮಟ್ಟದ ಅಕ್ವೇರಿಯಂ ನಿರ್ಮಿಸಿಕೊಡುವುದಾಗಿ ನ್ಯೂಜಿಲೆಂಡ್ ಮೂಲದ ಸಂಸ್ಥೆಯೊಂದು ಮುಂದೆ ಬಂದಿದೆ. ಈ ಸಂಸ್ಥೆ ಗುಜರಾತ್‍ನ ಅಹಮದಾಬಾದ್‍ನಲ್ಲಿ 257 ಕೋಟಿ ರೂ. ವೆಚ್ಚದಲ್ಲಿ 13 ಸಾವಿರ ಚ. ಮೀಟರ್ ವಿಸ್ತೀರ್ಣದಲ್ಲಿ ಅತ್ಯಾಕರ್ಷಕವಾಗಿ ಅಕ್ವಾಟಿಕ್ ಲೈಫ್ ಸೈನ್ಸ್ ಪಾರ್ಕ್ ನಿರ್ಮಿಸುತ್ತಿದ್ದು, ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಈ ಸಂಸ್ಥೆ ವಿವಿಧ ದೇಶಗಳಲ್ಲಿ 24 ಬೃಹದಾಕಾರದ ಅಕ್ವೇರಿಯಂ ಸ್ಥಾಪಿಸಿದೆ. ಅತ್ಯುತ್ತಮ ತಂತ್ರಜ್ಞರನ್ನು ಹೊಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಮೈಸೂರು ಮೃಗಾಲಯದ ಕಾರ್ಯನಿರ್ವಾಹಕ ಕಾರ್ಯದರ್ಶಿ ಅಜಿತ್ ಎಂ.ಕುಲಕರ್ಣಿ ಹಾಗೂ ಇನ್ನಿತರರು ಇತ್ತೀಚೆಗಷ್ಟೇ ಅಹಮದಾಬಾದ್‍ಗೆ ತೆರಳಿ, ಅಲ್ಲಿ ನಿರ್ಮಿಸುತ್ತಿರುವ ಅಕ್ವಾಟಿಕ್ ಲೈಫ್ ಸೈನ್ಸ್ ಪಾರ್ಕ್ ಕಾಮಗಾರಿ ಪರಿಶೀಲಿಸಿದ್ದಾರೆ. ಕಾಮಗಾರಿ ಗುಣಮಟ್ಟ ಹಾಗೂ ಬಳಸುತ್ತಿರುವ ತಂತ್ರಜ್ಞಾನವನ್ನು ಗಮನಿಸಿ, ಮೈಸೂರಿನ ಮೃಗಾಲಯದ ಅಕ್ವೇರಿಯಂ ಕಾಮಗಾರಿಗೆ ನ್ಯೂಜಿಲೆಂಡ್ ಸಂಸ್ಥೆಯ ತಂತ್ರಜ್ಞಾನ ಬಳಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಅಲ್ಲದೆ ಇದಕ್ಕಾಗಿ ಅನುಮೋದನೆ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ.

ಸ್ವಿಜ್   ಚಾಲೆಂಜ್ ಮೆಥೆಡ್: ಒಂದೆಡೆ ನ್ಯೂಜಿಲೆಂಡ್ ಮೂಲದ ಕಂಪನಿ ಅಕ್ವೇರಿಯಂ ಕಾಮಗಾರಿ ನಡೆಸಲು ಆಸಕ್ತಿ ಪ್ರದರ್ಶಿಸಿರುವ ಬೆನ್ನಲ್ಲೇ ಮೃಗಾಲಯ ಪ್ರಾಧಿಕಾರ ಕಾಮಗಾರಿ ಪೂರ್ಣಗೊಳಿಸಲು ಸ್ವಿಜ್ó ಚಾಲೆಂಜ್ ಮೆಥೆಡ್ ಅನುಸರಿಸುವುದನ್ನು ಆಯ್ಕೆಯಾಗಿಟ್ಟುಕೊಂಡಿದೆ. ಸರ್ಕಾರ ಪ್ರಸ್ತಾವನೆಗೆ ಅನುಮೋದನೆ ನೀಡಿದ ಬಳಿಕ ಟೆಂಡರ್ ಕರೆಯಲಿದೆ. ಒಂದು ವೇಳೆ ನ್ಯೂಜಿಲೆಂಡ್ ಸಂಸ್ಥೆಗೆ ಬದಲು ಬೇರೆ ಕಂಪನಿಗೆ ಟೆಂಡರ್ ದೊರೆತರೆ ಅಕ್ವೇರಿಯಂಗೆ ಅನುಸರಿಸುವ ತಂತ್ರಜ್ಞಾನ, ಐಡಿಯಾ ಹಾಗೂ ಡಿಸೈನ್ ಅನ್ನು ಟೆಂಡರ್ ಪಡೆದ ಕಂಪನಿಗೆ ನೀಡಿ, ಅದಕ್ಕಾಗಿ ವೆಚ್ಚವಾಗಿರುವ ಮೊತ್ತವನ್ನು ಪಡೆಯಲಿದೆ. ಇದನ್ನೇ ಸ್ವಿಜ್ó ಚಾಲೆಂಜ್ ಮೆಥೆಡ್ ಎನ್ನಲಾಗುತ್ತದೆ.

– ಎಂ.ಟಿ.ಯೋಗೇಶ್ ಕುಮಾರ್

Translate »