ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೆಂಗಳೂರಲ್ಲಿ ಭಾರೀ ಪ್ರತಿಭಟನೆ
ಮೈಸೂರು

ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದಿಂದ ಬೆಂಗಳೂರಲ್ಲಿ ಭಾರೀ ಪ್ರತಿಭಟನೆ

June 26, 2019

ಬೆಂಗಳೂರು: ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ವಾಲ್ಮೀಕಿ ಸಮುದಾಯದವರು ಹರಿಹರದ ರಾಜನಹಳ್ಳಿಯಿಂದ ರಾಜಧಾನಿ ಬೆಂಗಳೂರುವರೆಗೆ ಕಳೆದ 12 ದಿನಗಳಿಂದ ಪಾದಯಾತ್ರೆ ನಡೆಸಿ ನಗರದಲ್ಲಿಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನ ನಡೆಸಿದರು.

ಮಹರ್ಷಿ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಜೂ. 9ರಂದು ಕೈಗೊಂಡಿದ್ದ ಪಾದಯಾತ್ರೆ ಇಂದು ಬೆಂಗಳೂರು ತಲುಪಿ, ಅಪಾರ ಸಂಖ್ಯೆಯಲ್ಲಿ ಜನ ಸೇರಿ ಮೀಸ ಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿದರು. ಫ್ರೀಡಂ ಪಾರ್ಕ್‍ನಲ್ಲಿ ಸಮಾ ವೇಶಗೊಂಡ ಪ್ರತಿಭಟನಾಕಾರರು ಮೀಸಲಾತಿ ಪ್ರಮಾಣವನ್ನು ಶೇ.3 ರಿಂದ 7.5ರಷ್ಟು ಹೆಚ್ಚಿಸಬೇಕು. ಜನಸಂಖ್ಯೆ ಆಧರಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು. ಇದಕ್ಕೂ ಮುನ್ನ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನಾ ಕಾರರು ಸೇರಿದ್ದರಿಂದ ವಿಧಾನಸೌಧ, ಫ್ರೀಡಂ ಪಾರ್ಕ್, ಶೇಷಾದ್ರಿ ರಸ್ತೆ ಸುತ್ತಮುತ್ತ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಇದೇ ಸಂದರ್ಭದಲ್ಲಿ ಕೆಲವು ಪ್ರತಿಭಟನಕಾರರು ವಿಧಾನಸೌಧದ ಆವರಣಕ್ಕೆ ನುಗ್ಗಿದ್ದರಿಂದ ವಿಧಾನ ಸೌಧದ ಮುಂಭಾಗದಲ್ಲೂ ಸಾರ್ವಜನಿಕರು

ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾಯಿತು. ನಗರದ ಕೆ.ಆರ್.ವೃತ್ತ, ಹಡ್ಸನ್ ವೃತ್ತ, ಚಾಲುಕ್ಯ ವೃತ್ತ, ಆನಂದರಾವ್ ವೃತ್ತ ಸೇರಿದಂತೆ ಅನೇಕ ಕಡೆ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ತೀವ್ರ ತೊಂದರೆಯಾಯಿತು. ವಿಧಾನಸೌಧದ ಬಳಿ ಪ್ರತಿಭಟನಕಾರರ ತೆರವುಗೊಳಿಸಲು ಪೆÇಲೀಸರು ಹರಸಾಹಸ ಪಡಬೇಕಾಯಿತು.

ಫ್ರೀಡಂ ಪಾರ್ಕ್‍ನಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ, ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಕಳೆದ 12 ದಿನಗಳಿಂದ ಪಾದಯಾತ್ರೆ ನಡೆಸಿದ್ದೇವೆ. ರಾಜ್ಯದಲ್ಲಿ ನಮ್ಮ ಸಮುದಾಯದವರು ಸುಮಾರು 50 ಲಕ್ಷಕ್ಕೂ ಹೆಚ್ಚು ಜನರಿದ್ದೇವೆ. ಹಾಲಿ ಇರುವ 3.5ರಷ್ಟು ಮೀಸಲಾತಿ ಪ್ರಮಾಣವನ್ನು 7.5ಕ್ಕೆ ಹೆಚ್ಚಿಸಬೇಕು. ಸರ್ಕಾರದ ಕಣ್ಣು ತೆರೆಸಲು ಪಾದಯಾತ್ರೆ ಮಾಡಿದ್ದೇವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ದಿನವಿಡೀ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತದೆ ಎಂಬ ವಿಶ್ವಾಸವಿದೆ. ಇಲ್ಲದಿದ್ದರೆ ನಮ್ಮ ಹೋರಾಟದ ಸ್ವರೂಪ ಬದಲಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪಕ್ಷಾತೀತವಾಗಿ ಜನಪ್ರತಿನಿಧಿಗಳು ನಮ್ಮ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಪಾದಯಾತ್ರೆಯುದ್ದಕ್ಕೂ ನಮ್ಮ ಸಮುದಾಯದವರು ನಮಗೆ ಬೆಂಬಲ ನೀಡಿದ್ದಾರೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ಮೀಸಲಾತಿ ಸಿಗಬೇಕೆಂಬ ಹಿನ್ನೆಲೆಯಲ್ಲಿ ಈ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು. ಸಾರ್ವಜನಿಕರು ತೊಂದರೆ ಕೊಡುವ ಉದ್ದೇಶ ನಮ್ಮದಲ್ಲ. ನಮ್ಮ ಬೇಡಿಕೆ ಈಡೇರಿಕೆಗೆ ನಮ್ಮ ಹೋರಾಟ ಎಂದು ಸ್ಪಷ್ಟಪಡಿಸಿದರು.

ಸಮುದಾಯದವರನ್ನು ಸಂಘಟಿಸಿ ಪಾದಯಾತ್ರೆಯ ನೇತೃತ್ವ ವಹಿಸಿದ್ದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರು ಸರ್ಕಾರಕ್ಕೆ ಎರಡು ತಿಂಗಳ ಗಡುವು ನೀಡಿದ್ದಾರೆ. ಈ ಭರವಸೆ ಈಡೇರಿಸುವಲ್ಲಿ ವಿಫಲರಾದರೆ ಸರ್ಕಾರವನ್ನು ಉರುಳಿಸುವ ಹಾಗೂ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.

ವಾಲ್ಮೀಕಿ ಸಮುದಾಯದ ಎಲ್ಲ ಶಾಸಕರೂ ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಇದು ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮನ್ನು ಭೇಟಿ ಮಾಡಿದ ನಿಯೋಗಕ್ಕೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಬೇಡಿಕೆಯ ಕುರಿತು ಅಧ್ಯಯನ ನಡೆಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಮಧ್ಯೆ ಪ್ರತಿಭಟನಾಕಾರರನ್ನು ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಅರಣ್ಯ ಸಚಿವ ಸತೀಶ್ ಜಾರಕಿ ಹೊಳಿ ಭೇಟಿ ಮಾಡಿ ಪ್ರತಿಭಟನೆ ಕೈಬಿಡಲು ಮನವಿ ಮಾಡಿದರು. ಅಂತಿಮವಾಗಿ ಬೇಡಿಕೆ ಈಡೇರಿಸಲು ಎರಡು ತಿಂಗಳ ಗಡುವು ನೀಡಿ ಪ್ರತಿಭಟನೆ ಕೈಬಿಡಲಾಯಿತು.

ಎರಡು ತಿಂಗಳಲ್ಲಿ ಈಡೇರಬೇಕು
ತಮ್ಮ ಬೇಡಿಕೆಯನ್ನು ಈಡೇರಿಸುವುದಾಗಿ ಸರ್ಕಾರದ ಪರವಾಗಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಭರವಸೆ ನೀಡಿದ್ದಾರೆ. ಎರಡು ತಿಂಗಳ ಒಳಗೆ ಕ್ರಮ ತೆಗೆದುಕೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ. ಅದು ಈಡೇರದೆ ಇದ್ದರೆ ಶಾಸಕರು ಸಾಮೂಹಿಕ ರಾಜೀನಾಮೆ ನೀಡಲಿದ್ದಾರೆ. ಪರಮೇಶ್ವರ್ ಅವರ ಮನೆ ಮೇಲೆ ಕುಳಿತು ಪ್ರತಿಭಟನೆ ನಡೆಸುತ್ತೇನೆ. ಇಡೀ ರಾಜ್ಯ ಹೊತ್ತಿ ಉರಿಯುತ್ತದೆ ಎಂದು ಸ್ವಾಮೀಜಿ ಎಚ್ಚರಿಸಿದರು.

ಸಂಪುಟ ಸಭೆಯಲ್ಲಿ ಚರ್ಚೆ
ಇತರೆ ಸಮುದಾಯದವರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗದಂತೆ ಮೀಸಲಾತಿ ನಿಗದಿಪಡಿಸಲು ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಮೀಸಲಾತಿ ನೀಡಲು ಮೀಸಲಾತಿ ಅಧ್ಯಯನ ರಚಿಸಬೇಕೇ, ಸಂಪುಟ ಉಪ ಸಮಿತಿ ರಚಿಸುವುದೇ ಅಥವಾ ತಜ್ಞರ ಸಮಿತಿ ಮೂಲಕ ಅಧ್ಯಯನ ನಡೆಸುವುದೇ ಎಂಬ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. – ಸರ್ಕಾರದ ಭರವಸೆ

ಸ್ವಾಮೀಜಿ ಹೇಳಿದರೆ ರಾಜೀನಾಮೆ-ಶ್ರೀರಾಮುಲು
ಮೀಸಲಾತಿ ಹೋರಾಟಕ್ಕೆ ನಾನು ಬದ್ಧ. ಸ್ವಾಮೀಜಿ ಆದೇಶ ನೀಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಬಿ. ಶ್ರೀರಾಮುಲು ಹೇಳಿದರು. ಶಾಸಕ ಸ್ಥಾನದಲ್ಲಿ ಇರಲು ಸ್ವಾಮೀಜಿ ಕಾರಣ. ಇದು ಅವರು ಕೊಟ್ಟ ಭಿಕ್ಷೆ. ನೀವು ಆದೇಶಿಸಿದರೆ ಇದೇ ವೇದಿಕೆಯಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ರಾಜೀನಾಮೆ ವಿಚಾರವನ್ನು ಶ್ರೀರಾಮುಲು ಮೊದಲು ಪ್ರಸ್ತಾಪಿಸಿದರು.

Translate »