ICSE, CBSE ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ
ಮೈಸೂರು

ICSE, CBSE ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ

June 26, 2019

ಬೆಂಗಳೂರು, ಜೂನ್ 25 (ಕೆಎಂಶಿ)-ರಾಜ್ಯದಲ್ಲಿ ರುವ ಐಸಿಎಸ್‍ಇ ಹಾಗೂ ಸಿಬಿಎಸ್‍ಇ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವಾಗಿ ಕಲಿಸುವುದು ಕಡ್ಡಾಯ ಎಂದಿರುವ ನೂತನ ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ್, ನಿಯಮವನ್ನು ಪಾಲನೆ ಮಾಡದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾ ಗುತ್ತದೆ ಎಂದು ಇಂದಿಲ್ಲಿ ಎಚ್ಚರಿಸಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ಶಾಲೆಗಳಲ್ಲಿ ಕನ್ನಡ ಕಲಿಸದಿದ್ದರೂ ಕ್ರಮ ತೆಗೆದುಕೊಳ್ಳದ ಶಿಕ್ಷಣಾಧಿಕಾರಿಗಳ ವಿರುದ್ಧವೂ ಶಿಸ್ತು ಕ್ರಮ ತೆಗೆದು ಕೊಳ್ಳುವುದಾಗಿ ತಿಳಿಸಿದರು. ನಿಯಮಾವಳಿ ಪ್ರಕಾರ ರಾಜ್ಯದಲ್ಲಿ ಆರಂಭವಾಗಿರುವ ಸಿಬಿಎಸ್‍ಇ ಹಾಗೂ ಐಸಿಎಸ್‍ಇ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯ ವಾಗಿ ಕಲಿಸಲೇಬೇಕು. ಆದರೆ, ಕೆಲವು ಶಾಲೆಗಳಲ್ಲಿ ಈ ನಿಯಮ ಪಾಲನೆ ಮಾಡದೆ ನಿರ್ಲಕ್ಷಿಸಿವೆ. ಇಂತಹ ಶಾಲೆಗಳ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ ಇಂತಹ ಶಾಲೆಗಳು ಕನ್ನಡವನ್ನು ಕಲಿಸುತ್ತಿವೆಯೋ ಇಲ್ಲವೋ ಎಂದು ಪರಿಶೀಲನೆ ಮಾಡದೆ ಉದಾಸೀನ ಮಾಡಿರುವ ಡಿಡಿಪಿಐ ಹಾಗೂ ಬಿಇಓಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಇದರ ಜೊತೆಗೆ ಪರಿಶೀಲನೆ ಮಾಡಲು ತಾವೇ ಶೀಘ್ರವೇ ಜಿಲ್ಲಾ ಮಟ್ಟ ದಲ್ಲಿ ಪ್ರವಾಸ ಕೈಗೊಂಡು ಪರಿಶೀಲನೆ ಮಾಡುತ್ತೇನೆ. ಕನ್ನಡಕ್ಕೆ ಮಾನ್ಯತೆ ನೀಡದ ಶಾಲೆಗಳಿಗೆ ಮೊದಲ ಹಂತದಲ್ಲಿ ಎಚ್ಚರಿಕೆ ನೀಡಲಾಗುತ್ತದೆ.

ಈ ಎಚ್ಚರಿಕೆಯನ್ನು ಕಡೆಗಣಿಸಿದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು. ಬಡವರು, ಗ್ರಾಮೀಣ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಈಗಾಗಲೇ 1000 ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ಆರಂಭಿಸಲಾಗಿದೆ. ಇದಕ್ಕೆ ಬೇಡಿಕೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮುಂದಿನ ಶೈಕ್ಷಣಿಕ ವರ್ಷದಿಂದ ಇನ್ನಷ್ಟು ಇಂಗ್ಲಿಷ್ ಶಾಲೆಗಳನ್ನು ಆರಂಭಿಸಲಾಗುವುದು ಎಂದರು. ಇಂಗ್ಲಿಷ್ ಶಾಲೆಗಳನ್ನು ಆರಂಭಿಸಲಾಗುತ್ತಿರುವುದರಿಂದ ಕನ್ನಡ ಶಾಲೆಗಳಿಗೆ ಯಾವುದೇ ರೀತಿಯ ಧಕ್ಕೆ ಇಲ್ಲ. ಗ್ರಾಮೀಣ ಭಾಗದ ಬಡವರ ಮಕ್ಕಳು ಕೂಡಾ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂಬುದು ಸರ್ಕಾರದ ಉದ್ದೇಶ.

ಹಾಗೆಂದು ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ. ಪ್ರತಿ ವರ್ಷ ತಾಲೂಕು ಮಟ್ಟದಲ್ಲಿ 20ರಿಂದ 30 ಕನ್ನಡ ಶಾಲೆಗಳು ಮುಚ್ಚುತ್ತಿವೆ. ಈ ಹಿನ್ನೆಲೆಯಲ್ಲಿಯೇ ಸರ್ಕಾರದಿಂದಲೇ ಇಂಗ್ಲಿಷ್ ಶಾಲೆಗಳನ್ನು ಪ್ರಾರಂಭಿಸಲಾಗಿದೆ. ಈ ಶಾಲೆಗಳ ಜೊತೆ ಕನ್ನಡ ಶಾಲೆಗಳಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟು ಅಲ್ಲಿಯೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದರು. ಕಾರ್ಪೊರೇಟ್ ಕಂಪನಿಗಳ ಸಹಕಾರದೊಂದಿಗೆ ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು.

ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ಕೆಲವು ನ್ಯೂನತೆಗಳಿವೆ ಎಂಬ ಮಾತುಗಳು ಕೇಳಿಬಂದಿವೆ. ಇದನ್ನು ನಿವಾರಿಸಲಾಗುವುದು. ಹಾಗೆಯೇ ಕೆಪಿಎಸ್‍ಸಿ ಮೂಲಕ ನಡೆದ ಪರೀಕ್ಷೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಯಾಗಿಲ್ಲ ಎಂದು ಹೇಳಲಾಗಿದೆ. ಆ ಭಾಗದಲ್ಲಿ ಶಿಕ್ಷಕರು ಹೆಚ್ಚಿನ ಪ್ರಮಾಣದಲ್ಲಿ ನೇಮಕಾತಿ ಆಗುವ ಬಗ್ಗೆಯೂ ಗಮನಹರಿಸಲಾಗುವುದು ಎಂದರು

Translate »