ಹನೂರು: ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಚಿಕ್ಕಲ್ಲೂರು ಜಾತ್ರೆಯ ಮೊದಲ ದಿನವಾದ ಸೋಮವಾರ ರಾತ್ರಿ ಚಂದ್ರಮಂಡಲೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ಜರುಗಿತು.
ಜ್ಞಾನೇಂದ್ರ ಚೆನ್ನಂಜರಾಜೇ ಅರಸ್ ಅವರು ದೇವಾಲಯದಲ್ಲಿ ಕಂಡಾಯಗಳಿಗೆ ಪೂಜೆ ಸಲ್ಲಿಸಿದರು. ವಿವಿಧ ಕಡೆಗಳಿಂದ ಬಂದಿದ್ದ ಕಂಡಾಯಗಳು ಹಾಗೂ ಸಾವಿರಾರು ನೀಲಗಾರರ ಸಮೇತ ಚಂದ್ರ ಮಂಡಲದ ಕಟ್ಟೆಯನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿ ಚಂದ್ರ ಮಂಡಲಕ್ಕೆ ಪೂಜೆ ಸಲ್ಲಿಸಿ, ಅಗ್ನಿ ಸ್ಪರ್ಶ ಮಾಡಲಾ ಯಿತು. ನೆರೆದಿದ್ದ ನೀಲಗಾರರು ಪವಾಡ ಪುರುಷ ಸಿದ್ದಪ್ಪಾಜಿಯ ಗುಣಗಾನ ಮಾಡಿದರು. ಕೊಂಬು, ಕಹಳೆ ಮೊಳಗಿದವು. ದೇವರ ಗುಡ್ಡದ ಜಾಗಟೆ ನಿನಾದಕ್ಕೆ ಭಕ್ತರ ಜಯ ಘೋಷ ಮುಗಿಲು ಮುಟ್ಟಿತು. ಭಾನುವಾರ ದಿಂದಲೇ ಚಿಕ್ಕಲ್ಲೂರಿಗೆ ರಾಜ್ಯದ ಮೂಲೆ ಮೂಲೆಗಳಿಂದ ಮಂಟೇಸ್ವಾಮಿ ಹಾಗೂ ಸಿದ್ದಪ್ಪಾಜಿ ಭಕ್ತರ ದಂಡು ಹರಿದು ಬಂದಿತ್ತು. ಹೊಸ ವರ್ಷದ ಮೊದಲ ಹುಣ್ಣಿಮೆಯ ದಿನದಂದು ನಡೆದ ಚಂದ್ರಮಂಡಲೋತ್ಸವವನ್ನು ಜನರು ಕಣ್ತುಂಬಿಕೊಂಡು ಭಾವ ಪರವಶರಾ ದರು. ಬಿದುರಿನಿಂದ ಕಟ್ಟಿದ ಚಂದ್ರಮಂಡಲದ ಆಕೃತಿಗೆ ಭಕ್ತರು ತರುವ ಎಣ್ಣೆ ಬತ್ತಿ ಯನ್ನು ಸುತ್ತಿ, ಬೊಪ್ಪೇಗೌಡನ ಪುರದ ಮಠದ ಶ್ರೀಗಳು ಅಗ್ನಿ ಸ್ಪರ್ಶ ಮಾಡು ತ್ತಿದ್ದಂತೆ ನೆರೆದಿದ್ದ ಭಕ್ತರ ಜಯಕಾರ ಮಾರ್ದನಿಸಿತು.
ಉಘೇ ಸಿದ್ದಪ್ಪಾಜಿ ಎಂದು ಘೋಷಣೆಗಳನ್ನು ಕೂಗುತ್ತ ದವಸ ಧಾನ್ಯಗಳನ್ನು ಚಂದ್ರಮಂಡಲಕ್ಕೆ ಎರಚಿ ಭಕ್ತಿ ಸಮರ್ಪಣೆ ಮಾಡಿದರು. ಚಂದ್ರಮಂಡಲದ ಜ್ವಾಲೆ ಯಾವ ದಿಕ್ಕಿಗೆ ಪಸರಿಸು ವುದೊ ಆ ದಿಕ್ಕಿಗೆ ಮುಂದಿನ ವರ್ಷ ಮಳೆ, ಬೆಳೆ ಸಮೃದ್ಧಿ ಎನ್ನುವ ನಂಬಿಕೆ ಇರುವುದರಿಂದ ಚಂದ್ರ ಮಂಡಲಕ್ಕೆ ವಿಶೇಷ ಮಹತ್ವ. ನೆರೆದಿದ್ದ ಭಕ್ತರಿಗೆ ಅನ್ನದಾಸೋಹ, ವೈದ್ಯಕೀಯ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಸತ್ತಿಗೆ, ಸುರಪಾನಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹೊಸಮಠ ಹಾಗೂ ಹಳೇಮಠ ದೇವಸ್ಥಾನಗಳಲ್ಲಿ ಭಕ್ತರು ಸಾಲುಗಟ್ಟಿ ನಿಂತು ತಮ್ಮ ಹರಕೆ, ಕಾಣಿಕೆಗಳನ್ನು ಸಮರ್ಪಿಸಿದರು. ಇಂದು ಚಂದ್ರ ಮಂಡಲವು ಉತ್ತರ ದಿಕ್ಕಿಗೆ ವಾಲಿದ್ದು, ಆ ದಿಕ್ಕಿನಲ್ಲಿ ಉತ್ತಮ ಮಳೆ, ಬೆಳೆಯಾ ಗುತ್ತದೆ ಎಂದು ಭಕ್ತಾದಿಗಳು ವಿಶ್ವಾಸವ್ಯಕ್ತಪಡಿಸಿದ್ದಾರೆ.