ಚಾಮರಾಜನಗರ: ತಾಲೂಕಿನ ವೀರನ ಪುರ ಗ್ರಾಮದ ಕರಿಕಲ್ಲು ಕ್ವಾರೆಯ ಬಳಿ ಬುಧವಾರ ಗಂಡು ಚಿರತೆಯ ಕಳೇಬರ ಪತ್ತೆಯಾಗಿದೆ. ಸುಮಾರು ಎರಡು ಮೂರು ದಿನಗಳ ಹಿಂದೆಯೇ ಈ ಚಿರತೆ ಸಾವನ್ನ ಪ್ಪಿದೆ ಎನ್ನಲಾಗಿದೆ. ಕ್ವಾರೆಯ ಸುತ್ತ ಕೆಟ್ಟ ವಾಸನೆ ಬರುತ್ತಿತ್ತು.
ಇದನ್ನು ಗಮನಿಸಿ ಸ್ಥಳೀಯರು ನೋಡಿದಾಗ ಚಿರತೆ ಶವ ಪತ್ತೆಯಾಗಿದೆ. ಕೂಡಲೇ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿದ್ದಾರೆ. ಈ ವೇಳೆ ಚಿರತೆಯ ಮೈ ಮೇಲೆ ಹಾಗೂ ಬಾಯಿಯಲ್ಲಿ ಮುಳ್ಳುಗಳು ಕಂಡು ಬಂದಿದ್ದು, ಕಾಡು ಹಂದಿಯ ಜೊತೆ ಕಾದಾಡುವಾಗ ಚಿರತೆ ಮೃತಪಟ್ಟಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಬಳಿಕ, ಕಳೇಬರ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು. ತಾಲೂಕಿನ ಉಡಿಗಾಲ, ವೀರನಪುರ ಸೇರಿದಂತೆ ಸುತ್ತಲಿನ ಹಲವು ಗ್ರಾಮಗಳಲ್ಲಿ ಒಂದು ತಿಂಗಳಿನಿಂದ ಈ ಚಿರತೆಯು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭಯ ಮೂಡಿಸಿತ್ತು.