ಮೈಸೂರು: ಈ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಹದಿನೈದು ದಿನಗಳ ಕಾಲ ಹಾಡು, ನೃತ್ಯ, ನಾಟಕ ಕಲಿತರು. ಸಂಪನ್ಮೂಲ ವ್ಯಕ್ತಿಗಳಿಂದ ನಾನಾ ವಿಚಾರಗಳ ಬಗ್ಗೆ ತಿಳಿದುಕೊಂಡರು. ಮಣ್ಣಿನಿಂದ ನಾನಾ ರೀತಿಯ ಬೊಂಬೆಗಳನ್ನು ಮಾಡಿದರು. ಪೇಪರ್‍ನಿಂದ ನಾನಾ ತರಹದ ವಿನ್ಯಾಸಗಳನ್ನು ರಚಿಸಿ, ತಮ್ಮ ಕಲಾಕೌಶಲ್ಯ ಪ್ರದರ್ಶಿಸಿದರು.
ಮೈಸೂರಿನ ಬನ್ನಿಮಂಟಪ ಬಾಲಭವನ ಆವರಣದಲ್ಲಿ ಬಾಲ ಭವನ ಆಯೋಜಿಸಿದ್ದ 15 ದಿನಗಳ ಮಕ್ಕಳ ಉಚಿತ ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ್ದ ಹಿರಿಯ ಪ್ರಾಥಮಿಕ ಶಾಲೆಯ 140 ಮಕ್ಕಳು ಶಿಬಿರದ ಸಮಾರೋಪ ದಿನವಾದ ಶುಕ್ರವಾರ (ಮೇ 10) ಸಂಭ್ರಮಿಸಿದರು. ದೇಶಭಕ್ತಿ, ಭಾವಗೀತೆ, ಜಾನಪದ ಗೀತೆಗಳನ್ನು ಹಾಡಿ ರಂಜಿಸಿದರು. ಬಾಲ್ಯ ವಿವಾಹ ಕುರಿತ ನಾಟಕ ಪ್ರದರ್ಶಿಸಿ ಸೈ ಎನಿಸಿಕೊಂಡರು. ಬಾಲ್ಯ ವಿವಾಹದಿಂದಾಗುವ ಅನಾಹುತ ಗಳ ಕುರಿತಂತೆ ಸಂದೇಶ ಸಾರಿದರು. ಶಿಬಿರದ ಸಂಯೋಜಕಿ ಹಾಗೂ ಬಾಲಭವನದ ಸಂಗೀತ ಶಿಕ್ಷಕಿ ಶ್ಯಾಮಲಾಬಾಯಿ ನೇತೃತ್ವದಲ್ಲಿ ಶಿಬಿರದಲ್ಲಿ ಕ್ರಾಫ್ಟ್ ಶಿಕ್ಷಕಿ ಸೆಲ್ವಿ, ಚಿತ್ರಕಲೆ ಶಿಕ್ಷಕಿ ಬಿ.ಸಿ.ನಮಿತಾ ಇನ್ನಿತರರ ಮಾರ್ಗದರ್ಶನದಲ್ಲಿ ಮಕ್ಕಳು ತಾವು ಕಲಿತದ್ದನ್ನು, ತಯಾರಿಸಿದ್ದ ಕ್ಲೇ ಮಾಡೆಲ್, ಪೇಪಡ್ ಮೆಷ್, ಪೇಪರ್ ಕ್ರಾಫ್ಟ್, ಪೇಪರ್ ಆಭರಣ, ಚಿತ್ರಕಲೆಗಳನ್ನು ಪ್ರದರ್ಶಿಸಿದರು.
ಮೈಸೂರಿನ ಸಂತ್ ಜೋಸೆಫ್ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿ ತ್ರಿಷಾ, ಶಿಬಿರದ ಅತಿ ಪ್ರತಿಭಾವಂತ ವಿದ್ಯಾರ್ಥಿನಿ ಯಾಗಿ ಹೊರ ಹೊಮ್ಮಿದ್ದು, ಆಕೆ ಬಹುತೇಕ ಎಲ್ಲಾ ವಿಭಾಗ, ಸ್ಪರ್ಧೆಗಳಲ್ಲೂ ಮುಂಚೂಣಿಯಲ್ಲಿದ್ದು, ಗಮನ ಸೆಳೆದಳು.