ಮೈಸೂರು, ಜು.12(ಆರ್‍ಕೆ)-ಉಪ ರಾಷ್ಟ್ರಪತಿ ಗಳ ಆಗಮನದ ಹಿನ್ನೆಲೆಯಲ್ಲಿ ಕಾನ್‍ವಾಯ್ ವಾಹನ ಸರಾಗವಾಗಿ ಸಾಗಲು ಅನುಕೂಲವಾಗುವಂತೆ ಮೈಸೂರು ಮಹಾನಗರಪಾಲಿಕೆಯು ಅಗತ್ಯ ವ್ಯವಸ್ಥೆಗೆ ಇಂದು ಕ್ಷಿಪ್ರ ಕಾರ್ಯಾಚರಣೆ ನಡೆಸಿತು.
ಕಾರಿನಲ್ಲಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣ ದಿಂದ ನಜರ್‍ಬಾದಿನ ಸರ್ಕಾರಿ ಅತಿಥಿ ಗೃಹಕ್ಕೆ ಸಾಗುವ ರಸ್ತೆ, ನಾಳೆ(ಜು.13) ಸರ್ಕಾರಿ ಅತಿಥಿ ಗೃಹ ದಿಂದ ಕಾರ್ಯಕ್ರಮ ನಡೆಯುವ ಮಾನಸಗಂಗೋ ತ್ರಿಯ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (CIIL) ಮತ್ತು ಎಸ್‍ಜೆಸಿಇ ಬಳಿಯ ಪ್ರಾದೇಶಿಕ ಶಿಕ್ಷಣ ಸಂಸ್ಥೆ (ಖIಇ) ವರೆಗಿನ ರಸ್ತೆಗಳಲ್ಲಿ ಇರುವ ರಸ್ತೆ ಡುಬ್ಬಗಳನ್ನು ತೆರವುಗೊಳಿಸಲಾಗಿದೆ.
ಗುರುವಾರದಿಂದಲೂ ರಸ್ತೆಗಳ ಗುಂಡಿ ಮುಚ್ಚು ವುದು, ರಸ್ತೆ ಡುಬ್ಬಗಳನ್ನು ತೆರವುಗೊಳಿಸುವುದು, ರಸ್ತೆ ಬದಿ ಮತ್ತು ವಿಭಜಕಗಳಲ್ಲಿನ ಗಿಡ ಗಂಟಿ ಗಳನ್ನು ತೆಗೆಯುವುದು, ಬೀದಿ ದೀಪಗಳ ರಿಪೇರಿ. ಕೆಲಸವನ್ನು ಮೈಸೂರು ಮಹಾನಗರಪಾಲಿಕೆ ಅಧಿಕಾರಿಗಳು ಕ್ಷಿಪ್ರವಾಗಿ ನಡೆಸಿದ್ದಾರೆ.
ಗಣ್ಯರು, ಅತೀಗಣ್ಯರು ಸಾಗುವ ಮಾರ್ಗದಲ್ಲಿ ಶಿಷ್ಟಾ ಚಾರದ ಪ್ರಕಾರ ಯಾವ ಯಾವ ಕ್ರಮಗಳನ್ನು ಕೈಗೊಳ್ಳ ಬೇಕೆಂಬ ನಿಯಮವಿರುತ್ತದೋ ಅದೇ ಮಾದರಿಯಲ್ಲಿ ಪಾಲಿಕೆ, ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಮುಡಾ ಅಧಿಕಾರಿಗಳು ಉಪ ರಾಷ್ಟ್ರಪತಿಗಳು ಸಾಗುವ ರಸ್ತೆಗಳ ಸ್ವಚ್ಛತೆ, ಭದ್ರತಾ ವ್ಯವಸ್ಥೆಗಳನ್ನು ಮಾಡು ತ್ತಿದ್ದಾರೆ. ಮಂಡಕಳ್ಳಿ ವಿಮಾನ ನಿಲ್ದಾಣ, ಸರ್ಕಾರಿ ಅತಿಥಿಗೃಹ, ಸಿಐಐಎಲ್, ಆರ್‍ಐಇಗಳ ಬಳಿ ಕೆ.ಆರ್ ಆಸ್ಪತ್ರೆ, ಅಪೋಲೋ ಬಿಜಿಎಸ್ ಹಾಗೂ ನಾರಾಯಣ ಹೃದಯಾಲಯದ ಆಸ್ಪತ್ರೆಗಳ ಐಸಿಯು ಹೊಂದಿರುವ ಆಂಬುಲೆನ್ಸ್‍ಗಳನ್ನು ನಿಯೋಜಿಸಲಾಗಿದೆ. ಎಲ್ಲಾ ಸ್ಥಳಗಳಲ್ಲಿ ಅಗ್ನಿಶಾಮಕ ದಳದ ವಾಹನ, ಸಿಬ್ಬಂದಿ, ಸೇಫ್ ಹೌಸ್‍ಗಳು, ರೆಸ್ಟ್‍ರೂಂಗಳ ಸೌಲಭ್ಯಗಳನ್ನು ಒದಗಿಸಲಾಗಿದೆ. ಉಪರಾಷ್ಟ್ರಪತಿಗಳು ಆಗಮಿಸುವ ಮತ್ತು ನಿರ್ಗಮಿಸುವ ಮಂಡಕಳ್ಳಿ ವಿಮಾನ ನಿಲ್ದಾಣ, ವಾಸ್ತವ್ಯ ಹೂಡುವ ಸರ್ಕಾರಿ ಅತಿಥಿಗೃಹ, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎರಡೂ ಕೇಂದ್ರ ಸರ್ಕಾರದ ಸಂಸ್ಥೆಗಳ ಬಳಿ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಇನ್ನು ಮಂಡಕಳ್ಳಿ ವಿಮಾನ ನಿಲ್ದಾಣದ ಆವ ರಣದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸಲಾಗಿದೆ. ವಿಮಾನ ಬಂದಿಳಿಯುವ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮ ಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ.
ಸುತ್ತಲೂ ಕಾಂಪೌಂಡ್‍ನಲ್ಲಿ ಶಸ್ತ್ರ ಸಜ್ಜಿತ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಉಪರಾಷ್ಟ್ರಪತಿಗಳನ್ನು ಕರೆತರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ವಾಹನ ಗಳಿಗೆ ಅಧಿಕೃತ ಪಾಸ್ ನೀಡಲಾಗಿದೆ.