ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಚಂಡರಕಿ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ
ಮೈಸೂರು

ಗುರುಮಿಟ್ಕಲ್ ವಿಧಾನಸಭಾ ಕ್ಷೇತ್ರದ ಚಂಡರಕಿ ಸರ್ಕಾರಿ ಶಾಲೆಯಲ್ಲಿ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ

June 22, 2019

ಯಾದಗಿರಿ: ಹೆಚ್.ಡಿ.ಕುಮಾರಸ್ವಾಮಿ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ಯಾದಗಿರಿ ಜಿಲ್ಲೆಯ ಗುರುಮಿಟ್ಕಲ್ ಕ್ಷೇತ್ರದ ಚಂಡರಕಿ ಗ್ರಾಮದಲ್ಲಿ ವಾಸ್ತವ್ಯ ಹೂಡುವ ಮೂಲಕ ತಮ್ಮ ಗ್ರಾಮ ವಾಸ್ತವ್ಯವನ್ನು ಆರಂಭಿಸಿದರು.

ಮುಖ್ಯಮಂತ್ರಿಗಳು ಈ ಬಾರಿ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದರು. ಮುಖ್ಯ ಮಂತ್ರಿಗಳ ವಾಸ್ತವ್ಯಕ್ಕಾಗಿ ಚಂಡರಕಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು ಸಿಂಗರಿಸಲಾಗಿತ್ತು. ಕಳೆದ 1 ವರ್ಷದ ವಿವಿಧ ಇಲಾಖೆಗಳ ಸಾಧನೆಗಳನ್ನು ಬಿಂಬಿಸುವ ಮಳಿಗೆಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಸ್ಥಾಪಿಸಲಾಗಿತ್ತು. ಈ ಮಳಿಗೆಯನ್ನು ಮುಖ್ಯಮಂತ್ರಿಗಳು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಅವರು, ಈ ಹಿಂದೆ 2006ರಲ್ಲಿ ಗ್ರಾಮ ವಾಸ್ತವ್ಯ ಹೂಡಿದ್ದು ಫಲಪ್ರದವಾಗಿದೆ. ಈ ಬಾರಿ ಪ್ರತೀ ತಿಂಗಳು ಒಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದರು. ಜಲಧಾರೆ ಯೋಜನೆ ಯಡಿ ನದಿ ಮೂಲದಿಂದ ಯಾದಗಿರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಪ್ರತೀ ಹಳ್ಳಿಗೂ ಶುದ್ಧ ಕುಡಿಯುವ ನೀರು ಪೂರೈಸಲು 1 ಸಾವಿರ ಕೋಟಿ ರೂ. ನೀಡಲಾಗುವುದು ಎಂದು ಘೋಷಿಸಿದರು. ಚಂಡರಕಿ ಗ್ರಾಮದವರ ಬೇಡಿಕೆಯಂತೆ ಪಶು ಚಿಕಿತ್ಸಾಲಯ ಮಂಜೂರು ಮಾಡಿ ಪಶು ವೈದ್ಯಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಜಿಲ್ಲೆಯಲ್ಲಿ 300 ಹಾಸಿಗೆಗಳು, ಸುಸಜ್ಜಿತ ಆಸ್ಪತ್ರೆ ಮಂಜೂರಾತಿಗೆ ಆದೇಶ ನೀಡಲಾಗಿದೆ ಎಂದರು. ಗ್ರಾಮ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಗಳು ಜನತಾ ದರ್ಶನದ ಮೂಲಕ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಸ್ವಯಂ ಉದ್ಯೋಗ, ಭೂಮಿ ಮಂಜೂರಾತಿ, ಸಾಮಾಜಿಕ ಭದ್ರತಾ ಯೋಜನೆಗಳ ಮಾಸಾಶನ, ವಸತಿ ಸೌಕರ್ಯ ಮುಂತಾದ ಬೇಡಿಕೆಗಳೊಂದಿಗೆ ಬಂದ ಜನರ ಸಂಕಷ್ಟಗಳನ್ನು ಸಹಾನುಭೂತಿಯಿಂದ ಆಲಿಸಿದರು. ಈ ಮಧ್ಯೆ ವೇದಿಕೆ ಮುಂಭಾಗದಲ್ಲಿ ವಿಕಲ ಚೇತನರು ಜಮಾವಣೆಯಾಗಿದ್ದನ್ನು ಗಮನಿಸಿದ ಮುಖ್ಯಮಂತ್ರಿಗಳು, ಅವರಿದ್ದಲ್ಲಿಗೆ ತೆರಳಿ ಅಹವಾಲು ಸ್ವೀಕರಿಸಿದರು. ಜನತಾ ದರ್ಶನ ಕಾರ್ಯಕ್ರಮ ವೇಳೆ 4.15ರಿಂದ ಮಳೆ ಸುರಿಯಲಾರಂಭಿ ಸಿತು. ಮಳೆ ಬಂದರೂ ಕಾರ್ಯಕ್ರಮಕ್ಕೆ ಅಡ್ಡಿಯಾಗದಂತೆ ಮುನ್ನೆಚ್ಚರಿಕೆಯೊಂದಿಗೆ ಜಿಲ್ಲಾಡಳಿತ ಸಭಾಂಗಣ ನಿರ್ಮಿಸಿದ್ದರಿಂದ ಯಾವುದೇ ಅಡಚಣೆ ಇಲ್ಲದೇ ಜನತಾ ದರ್ಶನ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ರಾಜಶೇಖರ ಪಾಟೀಲ್, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ, ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ್, ಶಾಸಕರಾದ ಶರಣ ಬಸಪ್ಪ ದರ್ಶನಾಪುರ್, ಎಸ್.ಎಲ್.ಭೋಜೇಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎನ್.ಹೆಚ್. ಕೋನರೆಡ್ಡಿ ಮತ್ತಿತರರಿದ್ದರು. ಮುಖ್ಯಮಂತ್ರಿಗಳ ಗ್ರಾಮ ವಾಸ್ತವ್ಯ ವೇಳೆ ಅವರ ಅಭಿಮಾನಿಗಳು ಪಟಾಕಿ ಸಿಡಿಸಿ ಹಣ ವ್ಯಯ ಮಾಡುವ ಬದಲು ಅದೇ ಹಣದಲ್ಲಿ ಚಂಡರಕಿ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್‍ಗಳನ್ನು ವಿತರಿಸಿದ್ದು ವಿಶೇಷವಾಗಿತ್ತು.

Translate »