ಬೆಂಗಳೂರು, ಜು.21-ಮುಂಬೈನಲ್ಲಿರುವ ಅತೃಪ್ತ ಶಾಸಕರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಿಂದಿರುಗಿ ಬರುವಂತೆ ಆಹ್ವಾನ ನೀಡಿದ್ದಾರೆ. ಇಂದು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮುಖ್ಯಮಂತ್ರಿಗಳು, ಪ್ರಜಾಪ್ರಭುತ್ವ ಹಾಗೂ ಸಂವಿ ಧಾನದ ಮೂಲ ತತ್ವ, ಆಶಯವನ್ನೇ ಬುಡಮೇಲು ಮಾಡಲು ಬಿಜೆಪಿ ಹೊರಟಿರುವುದು ಇಡೀ ದೇಶಕ್ಕೆ ಅರಿವಾಗಬೇಕು. ಈ ಸಂದರ್ಭ ದಲ್ಲಿ ನಮ್ಮಿಂದ ದೂರ ಹೋಗಿರುವ ಶಾಸಕರು ಹಿಂತಿರುಗಿ ಅಧಿವೇಶನ ದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಎಲ್ಲರೂ ಹಿಂತಿರುಗಿ ಬನ್ನಿ. ಎಲ್ಲಾ ವಿಷಯಗಳ ಬಗ್ಗೆ ಒಟ್ಟಾಗಿ ಕುಳಿತು ಮುಕ್ತವಾಗಿ ಚರ್ಚಿಸೋಣ. ಪಕ್ಷ ತಾಯಿ ಇದ್ದಂತೆ. ಜಾತ್ಯಾತೀತ ತಳಹದಿಯ ನಮ್ಮ ಪಕ್ಷಗಳನ್ನು ಬಲಪಡಿಸಲು ನಿಷ್ಠೆಯಿಂದ ಶ್ರಮಿ ಸೋಣ ಎಂದು ಶಾಸಕರಿಗೆ ಕರೆ ನೀಡಿದ್ದಾರೆ. ರಾಜಕೀಯ ಪ್ರಭಾವದ ದುರ್ಬಳಕೆ ಮೂಲಕ ಪ್ರಜಾಪ್ರಭುತ್ವದ ಬುನಾದಿಯನ್ನೇ ಅಲುಗಾಡಿಸುತ್ತಿರುವ, ಜನ ತಂತ್ರದಡಿ ಆಯ್ಕೆಯಾದ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿರುವ ದುಷ್ಟಶಕ್ತಿಗಳಿಂದ ಸರ್ಕಾರವನ್ನು ಪಾರು ಮಾಡಬೇಕಾಗಿದೆ. ಅಧಿಕಾರಕ್ಕಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸಾಂವಿಧಾನಿಕವಾಗಿ ರಚಿಸಲಾದ ಸಂಸ್ಥೆಗಳನ್ನೇ ನಾಶ ಮಾಡಲು ಮುಂದಾಗಿರುವ ದುಷ್ಟಶಕ್ತಿಗಳಿಂದ ಪ್ರಜಾ ಪ್ರಭುತ್ವ ಹಾಗೂ ಸಂವಿಧಾನದ ಆಶಯಗಳನ್ನು ಉಳಿಸಲು ಜೊತೆಯಾಗಿ ಹೋರಾಟ ನಡೆಸೋಣ ಎಂದು ಮುಖ್ಯಮಂತ್ರಿಗಳು ಅತೃಪ್ತ ಶಾಸಕರಿಗೆ ಕರೆ ನೀಡಿದ್ದಾರೆ.
