ಮೈಸೂರು: ಚಿತ್ರರಂಗ ಸಮಾಜ ಪರಿವರ್ತನೆಗೆ ಪರಿಣಾಮಕಾರಿ ಮಾಧ್ಯಮ. ಹೀಗಾಗಿ ಸಮಾಜವನ್ನು ತಪ್ಪು ದಾರಿಗೆ ಎಳೆಯದಂತೆ ಸಿನಿಮಾ ಮಾಧ್ಯಮ ಎಚ್ಚರ ವಹಿಸಬೇಕು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ಮೈಸೂರಿನ ಕಲಾಮಂದಿರದಲ್ಲಿ ದಸರಾ ಚಲನಚಿತ್ರೋತ್ಸವ ಉಪಸಮಿತಿ ಬುಧವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮೈಸೂರು ದಸರಾ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಮಾಜದ ಉನ್ನತ ಬದಲಾವಣೆಗೆ ಸಿನಿಮಾ ಮಾಧ್ಯಮ ಪರಿಣಾಮಕಾರಿ. ಹೀಗಾಗಿ ಸಿನಿಮಾಗಳಲ್ಲಿ ಮಚ್ಚು, ಲಾಂಗುಗಳೆಂಬ ಹಿಂಸೆಯ ಸನ್ನಿವೇಶಗಳನ್ನು ಕಡಿಮೆ ಮಾಡುವ ಅಗತ್ಯವಿದೆ. ಸಮಾಜದಲ್ಲಿ ಶಾಂತಿ ಸುವ್ಯ ವಸ್ಥೆ ನೆಲೆಸುವಂತೆ ಸಿನಿಮಾ ಮಾಧ್ಯಮ ಬಳಸಿಕೊಳ್ಳಬೇಕು ಎಂದು ತಿಳಿಸಿದರು.
ಮೈಸೂರಿನೊಂದಿಗೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದರು. ಕನ್ನಡದ ಮೇರು ನಟ ಡಾ.ರಾಜ್ಕುಮಾರ್ ಅವರಿಗೆ ಮೈಸೂರು ಎಂದರೆ ಅಪಾರವಾದ ಪ್ರೀತಿ. ವರನಟ ಡಾ.ರಾಜ್ಕುಮಾರ್ ಅವರ ಸಿನಿಮಾಗಳು ನನ್ನಲ್ಲಿ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ತಾಯಿ ಹೃದಯ ಬೆಳೆಸಿತು. ಅದೇ ರೀತಿ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರಿಗೂ ಮೈಸೂರು ಅಚ್ಚುಮೆಚ್ಚಿನ ತಾಣ. ಇಂದಿನ ಅನೇಕ ಪ್ರಸಿದ್ಧ ನಟರು ಮೈಸೂರಿನ ಬಗ್ಗೆ ಪ್ರೀತಿ ಹೊಂದಿದ್ದಾರೆ ಎಂದು ತಿಳಿಸಿದರು.
ಮಂಡ್ಯದ ಮಹದೇವಪುರ ಹಾಗೂ ಮೇಲುಕೋಟೆಯಲ್ಲಿ ಸಿನಿಮಾ ಚಿತ್ರೀಕರಿಸಿದರೆ ಸಿನಿಮಾ ಯಶಸ್ಸು ಗಳಿಸುತ್ತದೆ ಎಂಬ ನಂಬಿಕೆ ಒಂದು ಕಾಲದಲ್ಲಿತ್ತು. ಇದೇ ಕಾರಣಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಅವರ ಸಿನಿಮಾಗಳಲ್ಲಿ ಒಂದು ಸಣ್ಣ ದೃಶ್ಯದಲ್ಲಾದರೂ ಮೇಲುಕೋಟೆ ಕಾಣಿಸಿಕೊಳ್ಳುತ್ತಿತ್ತು ಎಂದರು.
ನನ್ನ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಮೈಸೂರಿನಲ್ಲಿ ವೃತ್ತಿ ಜೀವನ ಆರಂಭ ವಾಯಿತು. ಮೈಸೂರು, ಮಂಡ್ಯ, ಕೊಡಗು ಹಾಗೂ ಹಾಸನ ಭಾಗದ ಸಿನಿಮಾ ಹಂಚಿಕೆದಾರನಾಗಿ ವೃತ್ತಿ ಜೀವನ ಆರಂಭಿಸಿದೆ. ನಜರ್ಬಾದಿನ ಮದ್ವೇಶ ಕಾಂಪ್ಲೆಕ್ಸ್ನಲ್ಲಿ ಕಚೇರಿ ತೆರೆದಿದ್ದೆ. ಹೀಗಾಗಿ ಮೈಸೂರಿನೊಂದಿಗೆ ನನಗೆ ದೊಡ್ಡ ನಂಟಿದೆ. ಚಿತ್ರಮಂದಿರಗಳಲ್ಲಿ ನಿಂತು ಸಿನಿಮಾಗಳನ್ನು ನೋಡುತ್ತಾ ಯಾವ ಸನ್ನಿವೇಶದ ದೃಶ್ಯಕ್ಕೆ ಜನರು ಭಾವುಕರಾಗುತ್ತಾರೆ ಎಂಬುದನ್ನು ಗಮನಿಸುತ್ತಿದ್ದೆ. ಆ ಬಳಿಕ ಹಂಚಿಕೆ ಮಾಡಲು ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಉತ್ತಮ ಚಿತ್ರಗಳ ಹಂಚಿಕೆ ಮಾಡುತ್ತಿದ್ದ ನಾನು ಚಿತ್ರ ನಿರ್ಮಾಣಕ್ಕೂ ಕೈ ಹಾಕಿದೆ. ನಮ್ಮ ಬ್ಯಾನರ್ನಲ್ಲಿ ನಿರ್ಮಾಣವಾದ `ಸೂರ್ಯವಂಶ’ ಚಿತ್ರ ಯಶಸ್ಸು ಕಂಡಿತು. ಅಭೂತಪೂರ್ವ ಯಶಸ್ಸು ಕಂಡ ಮತ್ತೊಂದು ಚಿತ್ರವೆಂದರೆ ಅದು `ಚಂದ್ರ ಚಕೋರಿ’. ಹೀಗಾಗಿ ನನ್ನ ಮೂಲ ವೃತ್ತಿ ಎಂದರೆ ಅದು ಕನ್ನಡ ಚಿತ್ರರಂಗ ಎಂದರು.
ಕೊಡಗಿಗೆ ಪ್ರವಾಸಿಗರ ಇಳಿಮುಖ: ಕೊಡಗು ಜಿಲ್ಲೆಯ ಅಭಿವೃದ್ಧಿ ಆರ್ಥಿಕ ಮೂಲವೆಂದರೆ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರು. ಆದರೆ ನೆರೆ ಹಾವಳಿಯಿಂದ ಅಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿದೆ. ಈ ನಡುವೆ ಮಾಧ್ಯಮಗಳು ಕೇರಳದಲ್ಲಿ ಆಗಿರುವ ಅನಾಹುತಗಳ ದೃಶ್ಯಗಳನ್ನು ಕೊಡಗಿನಲ್ಲಿ ನಡೆದಿದ್ದಾಗಿ ಬಿತ್ತರಿಸಿ ಮತ್ತಷ್ಟು ಆತಂಕದ ವಾತಾವರಣ ಸೃಷ್ಟಿಸಲಾಯಿತು. ಹೀಗಾಗಿ ಮಾಧ್ಯಮಗಳು ಹೆಚ್ಚಿನ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಅ.17, 18 ಕೊಡಗಿನಲ್ಲಿ ವಾಸ್ತವ್ಯ: ಕೊಡಗು ಜಿಲ್ಲೆಯ ನಾಗರಿಕರು ಹಾಗೂ ರೈತರ ಸಂಕಷ್ಟ ಗಳನ್ನು ಪರಿಹರಿಸುವ ಸಲುವಾಗಿ ಇದೇ ಅ.17 ಮತ್ತು 18ರಂದು ಅಲ್ಲಿ ವಾಸ್ತವ್ಯ ಹೂಡುತ್ತಿದ್ದೇನೆ. ಅಲ್ಲಿನ ಜನತೆಯ ನಿರೀಕ್ಷೆಗಳನ್ನು ಅರಿತು ಪರಿ ಹಾರ ದೊರಕಿಸಿ ಕೊಡುವ ಉದ್ದೇಶ ಹೊಂದಿ ದ್ದೇನೆ. ನಾಡು ಕಟ್ಟಲು ಹಣದ ಕೊರತೆ ಇಲ್ಲ. ಆದರೆ ಸರ್ಕಾರದ ಯೋಜನೆಗಳಲ್ಲಿ ಆಗುವ ಸೋರಿಕೆ ತಡೆಗಟ್ಟಿದರೆ ಸಾಕು. ಇದಕ್ಕಾಗಿ ನಮಗೆ ಬೇಕಿರುವುದು ಬದ್ಧತೆ ಅಷ್ಟೇ ಹೊರತು ಮತ್ತೇನಲ್ಲ. ರಾಜ್ಯದ ಎಲ್ಲಾ 30 ಜಿಲ್ಲೆಗಳ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಎಲ್ಲರೂ ಸೇರಿ ನಾಡನ್ನು ಕಟ್ಟಬೇಕಿದೆ ಎಂದು ನುಡಿದರು.
ಸನ್ಮಾನ: ಈ ವೇಳೆ ಚಿತ್ರರಂಗದ ಹಲವ ರನ್ನು ಸನ್ಮಾನಿಸಲಾಯಿತು. ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಧ್ಯಕ್ಷ ನಾಗತಿಹಳ್ಳಿ ಚಂದ್ರ ಶೇಖರ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ, ನಟ ವಿಜಯರಾಘವೇಂದ್ರ, ನಟಿಯರಾದ ಹರ್ಷಿಕಾ ಪೂಣಚ್ಚ, ಪಾರೂಲ್ ಯಾದವ್, ನಿರ್ದೇ ಶಕರಾದ ಸತ್ಯ ಪ್ರಕಾಶ್, ರಿಷಬ್ ಶೆಟ್ಟಿ, ತಿಥಿ ಸಿನಿಮಾ ಖ್ಯಾತಿಯ ನಟರಾದ ಸೆಂಚುರಿ ಗೌಡ, ಗಡ್ಡಪ್ಪ, ಶ್ರೀರಂಗಪಟ್ಟಣದ ಶ್ರೀದೇವಿ ಚಿತ್ರಮಂದಿರದ ಲಕ್ಷ್ಮೀ ದೇವಮ್ಮ, ಸಿನಿಮಾ ವಿತರಕ ರಾಜೇಂದ್ರ ಅವರನ್ನು ಸನ್ಮಾನಿಸಲಾಯಿತು.
ತಡವಾಯ್ತು: ಬೆಳಿಗ್ಗೆ 10.30ಕ್ಕೆ ನಿಗದಿಗೊಂಡಿದ್ದ ಸಮಾರಂಭ ಉದ್ಘಾಟನೆ ಸಿಎಂ ಬರುವಿಕೆಗಾಗಿ ಕಾದು ತಡವಾಗಿ ಆರಂಭವಾಯಿತು. ಸಿಎಂ ಕುಮಾರಸ್ವಾಮಿ ಮಧ್ಯಾಹ್ನ 12ಕ್ಕೆ ಆಗಮಿಸಿದ ಬಳಿಕ ಕಾರ್ಯಕ್ರಮ ಚಾಲನೆ ಪಡೆದುಕೊಂಡಿತು.
ಸಚಿವರಾದ ಜಿ.ಟಿ.ದೇವೇ ಗೌಡ, ಸಾ.ರಾ.ಮಹೇಶ್, ಎನ್.ಮಹೇಶ್, ಡಾ.ಜಯಮಾಲ, ಶಾಸಕರಾದ ಎಲ್. ನಾಗೇಂದ್ರ, ಹರ್ಷವರ್ಧನ್, ಅಶ್ವಿನ್ ಕುಮಾರ್, ನಿರಂಜನ್ ಕುಮಾರ್, ಡಾ.ಕೆ. ಅನ್ನದಾನಿ, ಕೆ.ಟಿ.ಶ್ರೀಕಂಠೇಗೌಡ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ್, ತಾಪಂ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ, ದಸರಾ ಚಲನಚಿತ್ರೋತ್ಸವ ಉಪಸಮಿತಿ ಉಪ ವಿಶೇಷಾಧಿಕಾರಿ ಬಿ.ಎನ್.ಗಿರೀಶ್ ಇತರರದ್ದರು.