ಮೇಲುಕೋಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ
ಮಂಡ್ಯ

ಮೇಲುಕೋಟೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧ

July 8, 2018
  • ಜನಸಂಪರ್ಕ ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ
  • ಜನರ ಹಲವು ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಸೂಚಿಸಿದ ಸಚಿವರು

ಪಾಂಡವಪುರ:  ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಬದ್ಧ ಎಂದು ಎಂದು ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಭರವಸೆ ನೀಡಿದರು.

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಏರ್ಪಡಿಸಿದ್ದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಈಗಾಗಲೇ ನೀಲಿನಕ್ಷೆ ತಯಾರಿಸಲಾಗಿದೆ. ಯೋಜನೆಯನ್ನೂ ರೂಪಿಸಲಾಗಿದೆ ಎಂದರು.

ಪಟ್ಟಣದಲ್ಲಿ ಕುಂಟಿತಗೊಂಡಿರುವ ಯುಜಿಡಿ ಸಮಸ್ಯೆ ಬಗೆಹರಿಸುವ ಬಗ್ಗೆ ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಯುಜಿಡಿಗೆ ಹೆಚ್ಚುವರಿ 5 ಕೋಟಿ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿಸುತ್ತೇನೆ ಎಂದರು.
ಜೊತೆಗೆ ಪಟ್ಟಣದಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ಹಣ ಬಿಡುಗಡೆ ಯಾಗಿದೆ. ಇದಕ್ಕೆ ಇನ್ನೂ ಹೆಚ್ಚುವರಿಯಾಗಿ 5 ಕೋಟಿ ಹಣ ಬಿಡುಗಡೆಗೊಳಿಸಿ ಒಟ್ಟು 10 ಕೋಟಿ ವೆಚ್ಚದಲ್ಲಿ ಪಟ್ಟಣದ ಎಲ್ಲಾ ರಸ್ತೆಗಳ ಅಭಿವೃದ್ಧಿ, ಕುಡಿಯುವ ನೀರಿನ ಸಮಸ್ಯೆ ಬಗೆಹರಿ ಸುತ್ತೇನೆ ಎಂದರು.

ಕ್ಷೇತ್ರದ ಸಾರ್ವಜನಿಕರಿಗೆ ಎಲ್ಲಾ ಕಚೇರಿಯ ಸೌಲಭ್ಯಗಳು ಒಂದೇ ಸೂರಿನಡಿ ದೊರೆಯಬೇಕು. ಒಂದೇ ಸೂರಿನಡಿ ದೊರೆಯವಬೇಕು, ಎಲ್ಲಾ ತಾಪಂ, ಜಿಪಂ ಕಚೇರಿಗಳು ಒಂದೆಡೆ ಕೆಲಸ ಮಾಡುವು ದಕ್ಕಾಗಿ ತಾಪಂ ಆವರಣದಲ್ಲಿ ಬೃಹತ್ ಬಹುಮ ಹಡಿ ಕಟ್ಟಡ ನಿರ್ಮಿಸಿ ಒಂದೇ ಕಟ್ಟಡದಲ್ಲಿ ಎಲ್ಲಾ ಇಲಾಖೆಗಳು ಕೆಲಸ ಮಾಡುವ ಯೋಜನೆ ರೂಪಿಸಿ ದ್ದೇನೆ. ಜತೆಗೆ ಎಲ್ಲಾ ಇಲಾಖೆಯ ಅಧಿಕಾರಿಗಳು ಕಾರ್ಯಕ್ಷೇತ್ರದಲ್ಲಿ ಇದ್ದು ಕೆಲಸ ಮಾಡುವುದಕ್ಕೂ ಸಹ ವಸತಿ ಗೃಹಗಳನ್ನು ನಿರ್ಮಾಣ ಮಾಡಿಸಿ ಕೊಡಲಾಗುವುದು ಎಂದರು.

ದುದ್ದ ಕ್ಷೇತ್ರಕ್ಕೆ ನೀರಿನ ಸೌಲಭ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯದ ರೈತರ 34 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಅಲ್ಲದೇ ದುದ್ದ ಹೋಬಳಿಯ ಕೆರೆಗಳಿಗೆ 30 ಕೋಟಿ ವೆಚ್ಚದಲ್ಲಿ ನೀರು ತುಂಬಿಸಲು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ ಹಣ ಬಿಡುಗಡೆ ಮಾಡಿದ್ದಾರೆ. ಜೊತೆಗೆ ದುದ್ದ ಹೋಬಳಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಪೂರೈಕೆಗೂ ಸಹ ಯೋಜನೆ ರೂಪಿಸಲಾಗಿದೆ ಎಂದರು.

ಮಂತ್ಲಿ ಕೊಡಬೇಕಾಗಿಲ್ಲ: ಅಧಿಕಾರಿಗಳು ನಮಗೇನೂ ಮಂತ್ಲಿ ಕೊಡಬೇಕಾಗಿಲ್ಲ. ನಿಮಗೆ ಏನಾದಾರು ಸಮಸ್ಯೆಗಳಿದ್ದರೆ ಹೇಳಿ ನಾನು ಬಗೆಹರಿಸಿ ಕೊಡುತ್ತೇನೆ. ಆದರೆ ಅಧಿಕಾರಿಗಳು ನಮ್ಮ ಜನರ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸಿಕೊಡಬೇಕು. ಆ ಮೂಲಕ ಅಧಿಕಾರಿಗಳು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸಬೇಕು. ಒಂದು ವೇಳೆ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟರೆ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸಭೆಯಲ್ಲಿ ಜಿಪಂ ಸದಸ್ಯರಾದ ಸಿ.ಅಶೋಕ್, ಶಾಂತಲ, ಅನುಸೂಯ, ತಾಪಂ ಅಧ್ಯಕ್ಷೆ ಪೂರ್ಣಿಮಾ , ಸ್ಥಾಯಿ ಸಮಿತಿ ಅಧ್ಯಕ್ಷ ಪುಟ್ಟೇಗೌಡ, ಸದಸ್ಯರಾದ ರಾಧಮ್ಮ, ಸಿ.ಎಸ್. ಗೋಪಾಲಗೌಡ, ಗೀತಾ, ಅಲ್ಪಳಿ ಗೋವಿಂದಯ್ಯ, ವಿ.ಎಸ್.ನಿಂಗೇಗೌಡ, ಶಿವಣ್ಣ, ರಾಮೇಗೌಡ, ನವೀನ, ಗಾಯಿತ್ರಿ, ಶೋಭಾ, ಸುಮಾಲತಾ, ಪುರಸಭೆ ಉಪಾಧ್ಯಕ್ಷೆ ಕೌಶಲ್ಯ, ಗ್ರಾಪಂ ಸದಸ್ಯೆ ಶೃತಿ, ತಹಶೀಲ್ದಾರ್ ಡಿ.ಹನುಮಂತಯ್ಯ, ಉಪತಹಶೀ ಲ್ದಾರ್ ಸುಧಾಕರ್, ತಾಪಂ ಇಓ ದರ್ಶನ್, ಡಿವೈಎಸ್‍ಪಿ ವಿಶ್ವನಾಥ್, ಸಿಪಿಐ ದೀಪಕ್ ಹಾಜರಿದ್ದರು.

ಸಮಸ್ಯೆ ಆಲಿಸಿದ ಸಚಿವ ಪುಟ್ಟರಾಜು

ಪಾಂಡವಪುರ ಪಟ್ಟಣದ ತಾಪಂ ಆವರಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಸಾರ್ವಜನಿಕರ ಹಲವು ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲಿಯೇ ಸಂಬಂಧಿಸಿದ ಅಧಿಕಾರಿಗಳಿಂದ ಪರಿಹಾರ ಸೂಚಿಸಿದರು. ತಮ್ಮ ಸಮಸ್ಯೆಗಳನ್ನು ಹೊತ್ತುಬಂದ ಸಾರ್ವಜನಿಕರ ಸಮಸ್ಯೆಗಳನ್ನು ಒಂದೊಂದಾಗಿ ಸ್ವೀಕರಿಸಿದ ಸಚಿವ ಸಿ.ಎಸ್.ಪುಟ್ಟರಾಜು ಕೆಲವು ಸಮಸ್ಯೆಗಳನ್ನು ಅಧಿಕಾರಿಗಳಿಂದ ಸ್ಥಳದಲ್ಲಿಯೇ ಬಗೆಹರಿಸುವ ಕೆಲಸ ಮಾಡಿದರು.

ಶ್ರೀರಂಗಪಟ್ಟಣ ಸಾರ್ವಜನಿಕ ಆಸ್ಪತ್ರೆಯಲ್ಲಿ `ಡಿ’ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿರುವ 17 ಮಂದಿ ನೌಕರರಿಗೆ ಕಳೆದ 1 ವರ್ಷದಿಂದಲೂ ವೇತನ ನೀಡಿಲ್ಲ. ಇದರಿಂದಾಗಿ ಈಗಾಗಲೇ ಮೂವರು ಕೆಲಸ ಬಿಟ್ಟು ಹೋಗಿದ್ದಾರೆ. ಸಂಬಳವಿಲ್ಲದೇ ಜೀವನ ನಡೆಸುವುದೇ ಕಷ್ಟವಾಗುತ್ತಿದೆ ಎಂದು ನೌಕರರಾದ ಕಿರಣ್, ಅಭಿ, ಮಧು, ದರ್ಶನ್, ಸೌಮ್ಯ, ಅಶ್ವಿನಿ, ಶಿವರಾಜು ಅವರು ಸಚಿವರ ಬಳಿ ತಮ್ಮ ಅಳಲು ತೊಡಗಿಸಿಕೊಂಡರು. ಇದಕ್ಕೆ ತಕ್ಷಣ ಸ್ಪಂದಿಸಿದ ಪುಟ್ಟರಾಜು ಈ ಬಗ್ಗೆ ಡಿಎಚ್‍ಓ ಅವರೊಂದಿಗೆ ಚರ್ಚಿಸಿ ಶೀಘ್ರವೇ `ಡಿ’ ಗ್ರೂಪ್ ನೌಕರರಿಗೆ ಸಂಬಳ ನೀಡಲು ಕ್ರಮ ವಹಿಸಲು ಸೂಚಿಸುವುದಾಗಿ ಭರವಸೆ ನೀಡಿದರು.

ಮೇಲುಕೋಟೆ ಮಹಿಳೆ ಜಯಲಕ್ಷ್ಮಿ ಅವರು 24 ವರ್ಷದ ಅಂಗವಿಕ ಮಗನಿದ್ದಾನೆ. ನಾನು ಮೇಲು ಕೋಟೆಯ ಸರಕಾರಿ ಶಾಲೆಯಲ್ಲಿ ಬಿಸಿಯೂಟ ನೌಕರೆಯಾಗಿ ಕೆಲಸ ಮಾಡುತ್ತಿದ್ದೆ. ಆದರೆ, ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ನನ್ನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ ಇದರಿಂದ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡರು. ಇದಕ್ಕೆ ಸ್ಪಂಧಿಸಿದ ಸಚಿವರು ಬಿಸಿಯೂಟ ಯೋಜನೆ ತಾಲೂಕು ಯೋಜನಾಧಿಕಾರಿ ನಾಸೀರ್ ಅವರಿಗೆ ಮಹಿಳೆಯನ್ನು ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚಿಸಿದರು.

Translate »