‘ಲ್ಯಾನ್ಸ್ ಡೌನ್’ ಕಟ್ಟಡವೀಗ ಮೂತ್ರ ವಿಸರ್ಜನಾ ವಲಯ!
ಮೈಸೂರು

‘ಲ್ಯಾನ್ಸ್ ಡೌನ್’ ಕಟ್ಟಡವೀಗ ಮೂತ್ರ ವಿಸರ್ಜನಾ ವಲಯ!

July 8, 2018

ಮೈಸೂರು: `ಲ್ಯಾನ್ಸ್ ಡೌನ್’ ಕಟ್ಟಡ ಹಿಂಭಾಗದ ಗಲ್ಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟುವಂತೆ ಇಲ್ಲಿನ ವ್ಯಾಪಾರಿಗಳು ಮೈಸೂರು ನಗರ ಪಾಲಿಕೆ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.

ಈ ಗಲ್ಲಿಯಲ್ಲಿ ಸಿಟಿ ಬಸ್‍ಸ್ಟಾಂಡ್‍ಗೆ ಬರುವ ಪ್ರಯಾಣಿಕರು, ಸಂತಪೇಟೆಗೆ ಬರುವ ಗ್ರಾಹಕರು ಸೇರಿದಂತೆ ಸಾರ್ವಜನಿಕರು ಈ ಸ್ಥಳದಲ್ಲಿ ಶೌಚಾಲಯವಿದ್ದರೂ ದಿನನಿತ್ಯ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಈ ಗಲ್ಲಿಯಲ್ಲಿ ಓಡಾಡುವುದೇ ಕಷ್ಟಕರವಾಗಿದ್ದು, ದುರ್ವಾಸನೆಯಿಂದ ಇಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಾಂಕ್ರಮಿಕ ರೋಗಗಳು ಹರಡುತ್ತಿವೆ. ಅದರಲ್ಲೂ ಮಳೆಗಾಲದಲ್ಲಿ ಈ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಗಲ್ಲಿಯಲ್ಲಿ ವ್ಯಾಪಾರ-ವಹಿವಾಟು ನಡೆಸುವುದೇ ದುಸ್ಥರವಾಗಿದೆ ಎಂದು ವ್ಯಾಪಾರಿ ಪನ್ನಂಲಾಲ್ `ಮೈಸೂರು ಮಿತ್ರ’ನೊಂದಿಗೆ ತಮ್ಮ ಅಳಲನ್ನು ತೊಡಿಕೊಂಡರು.

ಸಾಂಸ್ಕೃತಿಕ ನಗರಿ ಮೈಸೂರಿಗೆ ಮೂರು ಬಾರಿ `ಸ್ವಚ್ಛ ನಗರಿ’ ಎಂದು ಪ್ರಶಸ್ತಿ ಬಂದಿದೆ. ಆದರೆ, ನಗರದ ಹೃದಯ ಭಾಗದಲ್ಲಿ ಸ್ವಚ್ಛತೆ ಇಲ್ಲದೆ ಅವ್ಯವಸ್ಥೆ ತಾಣವಾಗಿದ್ದರೂ ಕೇಂದ್ರ ಸರ್ಕಾರ ಈ ಪ್ರಶಸ್ತಿ ಹೇಗೆ ಕೊಟ್ಟರೋ ತಿಳಿಯದು. ಆದ್ದರಿಂದ ಈ ಜಾಗದಲ್ಲಿ ನಿರ್ಮಾಣಗೊಂಡಿರುವ ಶೌಚಾಲಯವನ್ನು ಪುನರ್ ಆರಂಭಿಸಿ, ಸರಿಯಾದ ನಿರ್ವಹಣೆ ಮಾಡಬೇಕು. ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುವಂತೆ ಒತ್ತಾಯಿಸಿದ್ದಾರೆ.

Translate »