ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ ಲೋಕಾಯುಕ್ತ ಎಸ್ಪಿ ಜೆ.ಕೆ.ರಶ್ಮಿ ವಿಶ್ವಾಸ
ಮೈಸೂರು

ಆತ್ಮವಿಶ್ವಾಸದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ ಲೋಕಾಯುಕ್ತ ಎಸ್ಪಿ ಜೆ.ಕೆ.ರಶ್ಮಿ ವಿಶ್ವಾಸ

June 29, 2018

ಮೈಸೂರು: ಸ್ಪರ್ಧಾತ್ಮಕ ಪರೀಕ್ಷೆಯೆಂಬ ಚಕ್ರವ್ಯೂಹವನ್ನು ಭೇದಿಸಬೇಕಾದರೆ ಆತ್ಮವಿಶ್ವಾಸ ಇರಬೇಕು ಎಂದು ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಜೆ.ಕೆ.ರಶ್ಮಿ ಅಭಿಪ್ರಾಯಪಟ್ಟರು.

ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಕಾಲೇಜು ಕೊಠಡಿಯಲ್ಲಿ ಜ್ಞಾನಬುತ್ತಿ ಸಂಸ್ಥೆ ಆಯೋಜಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರದಲ್ಲಿ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧೆ ಹೆಚ್ಚಾಗಿರುವುದರಿಂದ ಅಂತರ್ಜಾಲದ ಮೂಲಕ ಎಲ್ಲಾ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆ ಮೂಲಕ ಒಂದು ದಿನದಲ್ಲಿ ಕಲಿಯುವುದನ್ನು ಕೇವಲ ಅರ್ಧ ಗಂಟೆಗಳಲ್ಲಿ ಕಲಿಯುತ್ತಿದ್ದಾರೆ. ಹಾಗಾಗಿ ಅಂತಹ ವ್ಯಕ್ತಿಗಳ ನಡುವೆ ಸ್ಪರ್ಧೆ ಎದುರಿಸಬೇಕಿರುವುದರಿಂದ ಸಾಧಿಸುತ್ತೇನೆಂಬ ಛಲ, ಆತ್ಮವಿಶ್ವಾಸ ಇರಬೇಕು ಎಂದು ಹೇಳಿದರು.

ಆತ್ಮ ವಿಶ್ವಾಸದಿಂದ ಮಾತ್ರ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಸಾಧ್ಯ. ಹಾಗಾಗಿ ಪರೀಕ್ಷೆಯಲ್ಲಿ ಇಂಥ ಪ್ರಶ್ನೆಯನ್ನೇ ಕೇಳುತ್ತಾರೆಂದು ಹೇಳಲಾಗದು. ಹಾಗಾಗಿ ಎಲ್ಲಾ ವಿಷಯಗಳನ್ನು ಅಧ್ಯಯನ ಮಾಡಬೇಕು. ಅದನ್ನು ಒಮ್ಮೆ ಮನನ ಮಾಡಿಕೊಳ್ಳಬೇಕು. ನಿರಂತರ ಪರಿಶ್ರಮ ಅಗತ್ಯ ಎಂದು ಸಲಹೆ ನೀಡಿದರು.

ನಮ್ಮ ಪೊಲೀಸ್ ಇಲಾಖೆಯಲ್ಲೇ ಒಬ್ಬರಿಗೆ ಪೇದೆಯಿಂದ ಇನ್ಸ್‍ಪೆಕ್ಟರ್ ಹುದ್ದೆಗೆ ಬಡ್ತಿ ನೀಡಲಾಗಿತ್ತು. ಆದರೂ ಸುಮ್ಮನೆ ಕೂರದೆ ಪರೀಕ್ಷೆ ತೆಗೆದುಕೊಂಡು ಕಷ್ಟಪಟ್ಟು ಓದಿ ಐಆರ್‍ಎಸ್ ಪಾಸು ಮಾಡಿದರು. ಹಾಗಾಗಿ ಪರೀಕ್ಷೆಗಳನ್ನು ತೆಗೆದುಕೊಂಡವರು ಎಪಿಜೆ ಅಬ್ದುಲ್ ಕಲಾಂರವರ ಮಟ್ಟಕ್ಕೆ ಏರುತ್ತೇನೆಂಬ ಗುರಿಯನ್ನು ಇಟ್ಟುಕೊಳ್ಳಬೇಕು. ಆ ಮೂಲಕ ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಸಲಹೆ ನೀಡಿದರು.

ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರಾದ ಶೃತಿ ಚೇತನ್, ಮುಡಾ ಮುಖ್ಯ ಇಂಜಿನಿಯರ್ ಜೆ.ಸುರೇಶ್‍ಬಾಬು, ಕೆ.ಆರ್.ನಗರ ಸರ್ಕಾರಿ ಪಿಯು ಕಾಲೇಜಿನ ಸಿ.ಮೋಹನ್, ಇಲವಾಲ ಸರ್ಕಾರಿ ಪಿಯು ಕಾಲೇಜಿನ ಹೆಚ್.ಎಲ್.ಶೈಲಜಾ, ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಆರ್.ಎನ್.ಪದ್ಮನಾಭ, ಮೈಕಾ ಮಹೇಶ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಕೆ.ಸವಿತಾ, ಜ್ಞಾನಬುತ್ತಿ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಮತ್ತಿತರರು ಉಪಸ್ಥಿತರಿದ್ದರು.

Translate »