ಬೆಂಗಳೂರು: ರಾಜ್ಯದ ಹಳ್ಳಿ-ಹಳ್ಳಿಗಳಲ್ಲಿ ಕಿರಾಣ ಅಂಗಡಿಗಳಿಂದ ಹಿಡಿದು ಹಲವು ಕಡೆ ಪರವಾನಗಿ ಇಲ್ಲದೆ ಮದ್ಯ ಮಾರಾಟವಾಗುತ್ತಿರುವುದರಿಂದ ಸಣ್ಣ ಸಣ್ಣ ಹುಡುಗರೂ ಮದ್ಯವ್ಯಸನಿಗಳಾಗುತ್ತಿದ್ದಾರೆ.ಹೀಗಾಗಿ ತಕ್ಷಣವೇ ಪರವಾನಗಿ ರಹಿತ ಮಾರಾಟವನ್ನು ಸರ್ಕಾರ ಕಟ್ಟು ನಿಟ್ಟಾಗಿ ತಡೆಗಟ್ಟಬೇಕು ಎಂದು ಹಿರಿಯ ಕಾಂಗ್ರೆಸ್ ನಾಯಕ ಬಿ.ಸಿ.ಪಾಟೀಲ್ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿಂದು ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಾಜ್ಯ ಸರ್ಕಾರ ಮದ್ಯದಂಗಡಿಗಳಿಗೆ ಲೈಸೆನ್ಸ್ ನೀಡಿದೆ.ಆದರೆ ಲೈಸೆನ್ಸ್ ಇಲ್ಲದೆ ಹಳ್ಳಿ ಹಳ್ಳಿಗಳಲ್ಲಿ ಮದ್ಯ ಮಾರಾಟವಾಗುತ್ತಿದೆ ಎಂದು ದೂರಿದರು.
ಲೈಸೆನ್ಸ್ ಇರುವ ಮದ್ಯದಂಗಡಿಗಳಲ್ಲಿ ಮದ್ಯ ಮಾರಾಟ ಮಾಡುವುದು ಬೇರೆ.ಆದರೆ ಹೀಗೆ ಹಳ್ಳಿ-ಹಳ್ಳಿಗಳಲ್ಲಿ ಲೈಸೆನ್ಸ್ ಇಲ್ಲದೆ ಮಾರಾಟ ಆಗುತ್ತಿರುವುದರಿಂದ ಹದಿನಾರು, ಹದಿನೇಳು ವರ್ಷದ ಹುಡುಗರು ಮದ್ಯ ವ್ಯಸನಕ್ಕೆ ತುತ್ತಾಗುತ್ತಿದ್ದಾರೆ.
ದುಡಿದು ನಾಡು ಕಟ್ಟಬೇಕಾದ ಯುವ ಸಮುದಾಯ ಈ ರೀತಿ ಚಿಕ್ಕ ವಯಸ್ಸಿನಲ್ಲೇ ಕುಡಿಯುವ ವ್ಯಸನಕ್ಕೆ ತುತ್ತಾದರೆ ಸಂಬಂಧಪಟ್ಟ ಕುಟುಂಬಗಳ ಕತೆ ಏನು? ನಾಳೆ ನಾಡು ಕಟ್ಟುವ ಉದ್ದೇಶಗಳ ಕತೆ ಏನು ಅಂತ ಪ್ರಶ್ನಿಸಿದರು.
ಹೀಗಾಗಿ ಸರ್ಕಾರ ತಕ್ಷಣವೇ ಲೈಸೆನ್ಸ್ ರಹಿತವಾಗಿ ಕಂಡ ಕಂಡಲ್ಲಿ ಮದ್ಯ ಮಾರಾಟವಾಗುವುದನ್ನು ತಡೆಗಟ್ಟಬೇಕು. ಆ ಮೂಲಕ ವ್ಯವಸ್ಥೆಗೆ ಬಲ ತುಂಬುವ ಕೆಲಸ ಮಾಡಬೇಕು.
ಹಳ್ಳಿಗಳಲ್ಲಿ ಕಿರಾಣ ಅಂಗಡಿಗಳಿಂದ ಹಿಡಿದು ಕಂಡ ಕಂಡ ಷಾಪುಗಳಲ್ಲಿ ಮದ್ಯ ಮಾರಾಟವಾಗುತ್ತಿದೆ. ಇದನ್ನು ನೋಡಿಯೂ ಅಧಿಕಾರಿಗಳು ಸುಮ್ಮನಿದ್ದಾರೆ. ಇದು ಸರಿಯಲ್ಲ ಎಂದು ಪ್ರಶ್ನೆ ಮಾಡಿದರು.ಇದೇ ರೀತಿ ಸರ್ಕಾರಿ ಶಾಲೆಗಳಿಗೆ ಅಗತ್ಯದ ಉಪಾಧ್ಯಾಯರನ್ನು ಭರ್ತಿ ಮಾಡಿ. ಇಲ್ಲದೆ ಹೋದರೆ ನಗರ,ಪಟ್ಟಣ ಪ್ರದೇಶಗಳಲ್ಲಿ ಖಾಸಗಿ ಕಾಲೇಜುಗಳ ಕಡೆ ಜನ ಮುಖ ಮಾಡುವ ಸ್ಥಿತಿ ಬರುತ್ತದೆ.
ಹೀಗಾದರೆ ನಾಳೆ ಬಡ, ಮಧ್ಯಮ ವರ್ಗದವರ ಗತಿ ಏನು? ಎಲ್ಲಕ್ಕಿಂತ ಮುಖ್ಯವಾಗಿ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ ಉಪಾಧ್ಯಾಯರ ಹುದ್ದೆಗಳನ್ನು ಭರ್ತಿ ಮಾಡಲು ನಿಮಗೇನು ತೊಂದರೆ, ತಕ್ಷಣ ಆ ಕೆಲಸ ಮಾಡಿ ಎಂದು ಮನವಿ ಮಾಡಿದರು.