ಡಾ. ಕದ್ರಿ ಗೋಪಾಲನಾಥರಿಗೆ ಮೈಸೂರಲ್ಲಿ ನುಡಿ-ನಾದ ನಮನ
ಮೈಸೂರು

ಡಾ. ಕದ್ರಿ ಗೋಪಾಲನಾಥರಿಗೆ ಮೈಸೂರಲ್ಲಿ ನುಡಿ-ನಾದ ನಮನ

November 1, 2019

ಮೈಸೂರು, ಅ.31(ಎಂಕೆ)- ಮಹಾನ್ ಹಠವಾದಿಯಾದ ಡಾ. ಕದ್ರಿ ಗೋಪಾಲನಾಥ್ ಅವರು ಸಂಗೀತ ಕ್ಷೇತ್ರದಲ್ಲಿ ಕರ್ನಾಟಕ ಹಿರಿಮೆಯನ್ನು ಜಗತ್ತಿಗೆ ಸಾರಿದ್ದಾರೆ ಎಂದು ಡೋಲು ವಿದ್ವಾನ್ ಎಸ್.ಪುಟ್ಟರಾಜು ಬಣ್ಣಿಸಿದರು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾಂಗಣದಲ್ಲಿ ಮೈಸೂರಿನ ಎಲ್ಲಾ ಸಂಗೀತ ಸಭೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಖ್ಯಾತ ಸ್ಯಾಕ್ಸೋಫೋನ್ ವಿದ್ವಾಂಸ ‘ಪದ್ಮಶ್ರೀ ಡಾ.ಕದ್ರಿ ಗೋಪಾಲನಾಥ್’ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದೇಶಿ ಸ್ಯಾಕ್ಸೋ ಫೋನ್ ವಾದನದ ಘನತೆಯನ್ನು ಹೆಚ್ಚಿಸಿದ ಕೀರ್ತಿ ಕದ್ರಿ ಗೋಪಾಲನಾಥ್ ಅವರಿಗೆ ಸಲ್ಲುತ್ತದೆ ಎಂದರು.

ಕರ್ನಾಟಕ ಮೇರು ವಾದ್ಯಗಾರರಾಗಿದ್ದ ಅವರು, ಸಾಧನೆಗಾಗಿ ಸಂಸಾರವನ್ನೇ ತೊರೆದಿದ್ದರು. ಅವರೊಂದಿಗೆ ಹಲವಾರು ಕಾರ್ಯ ಕ್ರಮಗಳಲ್ಲಿ ಪಕ್ನವಾದಕನಾಗಿ ಕೆಲಸ ಮಾಡಿರುವುದು ನನಗೆ ಹೆಮ್ಮೆ ಎನಿಸುತ್ತದೆ. ಮದುವೆ ಸಮಾರಂಭವೊಂದರಲ್ಲಿ ಅವರೊಂ ದಿಗೆ ಮೊದಲ ಬಾರಿ ಪಕ್ನವಾದಕನಾಗುವ ಅವಕಾಶ ದೊರಕಿತು. ನನ್ನ ವಾದನವನ್ನು ಕೇಳಿದ ಅವರು, ಸ್ವಲ್ಪ ದಿನದ ನಂತರ ಪತ್ರ ಬರೆದು ನಮ್ಮೊಂದಿಗೆ ಎಲ್ಲಾ ಸಂಗೀತ ಕಾರ್ಯಕ್ರಮಗಳಿಗೂ ಬರುವಂತೆ ಹೇಳಿದ್ದರು. ಅದಕ್ಕೆ ಒಪ್ಪಿ ಅವರೊಂದಿಗೆ ಸೇರಿದೆ ಎಂದು ಸ್ಮರಿಸಿದರು. ಕದ್ರಿ ಗೋಪಾಲನಾಥ್ ಅವರ ಜತೆಗೆ ಹಲ ವಾರು ದೇಶ-ವಿದೇಶಗಳನ್ನು ಸುತ್ತಿದ್ದೇನೆ. ಕೆಲವು ಸಂದರ್ಭಗಳಲ್ಲಿ ಅವರೇ ನನಗೆ ಸಂಭಾವನೆ ನೀಡುತ್ತಿದ್ದರು. ಸಂಭಾವನೆಗಿಂತ ಅವರೊಂದಿಗೆ ಸಂಗೀತ ಕಾರ್ಯಕ್ರಮ ನೀಡುವುದೇ ಭಾಗ್ಯ ವಾಗಿತ್ತು. ಸ್ಯಾಕ್ಸೋಫೋನ್‍ನಲ್ಲಿ ಎಲ್ಲಾ ರೀತಿಯ ಪ್ರಯೋಗ ಗಳನ್ನು ಮಾಡಿದ್ದಾರೆ. ಅವರಂತೆ ಮತ್ತೊಬ್ಬ ಸ್ಯಾಕ್ಸೋಫೋನ್ ವಾದಕ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದರು.

ಹಿರಿಯ ಸಂಗೀತ ಸಂಘಟಕ ಸಿ.ಆರ್.ಹಿಮಾಂಶು ಮಾತನಾಡಿ, 4 ದಶಕಗಳಿಗೂ ಹೆಚ್ಚುಕಾಲ ಅವರೊಂದಿಗಿನ ಒಡನಾಟ ಅವಿಸ್ಮ ರಣೀಯವಾದುದು. ಅಂತಹ ಕಲಾವಿದರನ್ನು ನೋಡುವುದು ಬಹಳ ಕಷ್ಟ. ದೈಹಿಕವಾಗಿ ನಮ್ಮನ್ನು ಅಗಲಿದ್ದರೂ ಅವರು ನೀಡಿದ ಸಂಗೀತ ಶಾಶ್ವತವಾಗಿದೆ. ನಿರಂತರ ಸಂಗೀತ ಕಾರ್ಯಕ್ರಮ ನೀಡಬೇಕು ಎಂಬುದು ಅವರ ಮುಖ್ಯ ಉದ್ದೇಶವಾಗಿತ್ತು ಎಂದರು.

ಇದೇ ವೇಳೆ ವಿದ್ವಾನ್ ಕೊಡಿಯಾಲ ಕೃಷ್ಣಮೂರ್ತಿ, ಶ್ರೀಧರ್ ಮತ್ತು ಸ್ಯಾಕ್ಸೋಫೋನ್ ವಾದಕ ಹರೀಶ್ ಪಂಡಿತ್ ಅವರಿಂದ ನಾದನಮನವನ್ನು ಸಲ್ಲಿಸಲಾಯಿತು. ವಯೋಲಿನ್ ವಾದಕನಾಗಿ ಹೆಚ್.ಯಶಸ್ವಿ, ತಬಲ ಅರ್ಜುನ್ ಕಾಳಿ, ಮೃದಂಗ ಜಿ.ಟಿ.ಸ್ವಾಮಿ, ಡೋಲು ವಾದಕರಾಗಿ ವಿದ್ವಾನ್ ಪುಟ್ಟರಾಜು ಸಹಕಾರ ನೀಡಿದರು. ಹಿರಿಯ ಕಲಾಪೋಷಕ ಕೆ.ವಿ.ಮೂರ್ತಿ, ನಾದಬ್ರಹ್ಮ ಸಂಗೀತ ಸಭಾ ಕಾರ್ಯದರ್ಶಿ ಕೆ.ಎಸ್.ಎನ್.ಪ್ರಸಾದ್, ಅಕ್ಕ ಮಹಾದೇವಿ ಮತ್ತಿತರರು ಉಪಸ್ಥಿತರಿದ್ದರು.

Translate »