ಮೈಸೂರು: ಸೇವೆಯಿಂದ ನಿವೃತರಾದ ಮೈಸೂರು ವಿವಿ ಪರಿಸರ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾ ಪಕ ಪ್ರೊ.ಎಸ್.ಎಲ್.ಬೆಳಗಲಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿ, ಬೀಳ್ಕೊಡಲಾಯಿತು. ಮಾನಸಗಂಗೋತ್ರಿ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಪ್ರೊ. ಎಸ್.ಎಲ್.ಬೆಳಗಲಿ ಅಭಿನಂದನಾ ಸಮಿತಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮೈಸೂರು ವಿವಿ ವಿಶ್ರಾಂತ ಕುಲಪತಿ ಪ್ರೊ.ಎಸ್.ಎನ್.ಹೆಗಡೆ ಅವರು ಪ್ರೊ. ಎಸ್.ಎಲ್.ಬೆಳಗಲಿ ದಂಪತಿಗಳನ್ನು ಸನ್ಮಾನಿಸಿ ಅಭಿನಂದಿಸಿದರು.
ಬಳಿಕ ಮಾತನಾಡಿದ ಅವರು, ಶಿಕ್ಷಕರಿಗೆ ನಿವೃತ್ತಿ ಎಂಬುದಿಲ್ಲ. ಶೈಕ್ಷಣಿಕ ಕ್ಷೇತ್ರದಲ್ಲಿ ನಿವೃತ್ತಿ ನಂತರವೂ ಏನಾದರೂ ಕೆಲಸ ಇದ್ದೇ ಇರುತ್ತದೆ. ಶಿಕ್ಷಣ ವಲಯದಂತೆ ಬೇರೆ ಕ್ಷೇತ್ರಗಳಲ್ಲಿ ನಿವೃತ್ತಿ ನಂತರ ಮನೆಯಲ್ಲೇ ಇರಬೇಕು. ಬ್ಯಾಂಕ್, ಸರ್ಕಾರಿ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ಹೊರಬಂದರೆ ಮುಗಿಯಿತು. ಆದರೆ, ಈ ಕ್ಷೇತ್ರ ಹಾಗಲ್ಲ. ಮೈಸೂರು ವಿ.ವಿ.ಯಲ್ಲಿ ನಿವೃತ್ತಿ ನಂತರವೂ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿರುತ್ತವೆ. ಅದನ್ನು ನಿವೃತ್ತರಾದ ಪ್ರಬುದ್ಧ ಪ್ರಾಧ್ಯಾಪಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಧ್ಯಾಪಕರ ಆಯ್ಕೆ ಪ್ರಕ್ರಿಯೆಯಲ್ಲಿ ಸುಧಾರಣೆ ಅಗತ್ಯವಿದೆ. ವೃತ್ತಿ ಪರಿಣಿತರು ಮೈಸೂರು ವಿವಿ ಕ್ಯಾಂಪಸ್ ಅಥವಾ ಜಿಲ್ಲೆಯಲ್ಲಿ ಮಾತ್ರ ವಲ್ಲದೆ ಹೊರಗೂ ಇರುತ್ತಾರೆ. ಅಂತಹವರನ್ನು ಗುರುತಿಸಿ ಅವಕಾಶ ಕಲ್ಪಿಸುವ ಕೆಲಸ ಆಗಬೇಕು. ವಿವಿಯಲ್ಲಿ ಓದಿ ಹೊರ ಬಂದವರಿಗೆ ಜತೆಗೆ ಹೊರ ಜಿಲ್ಲೆ, ರಾಜ್ಯಗಳಿಂದಲೂ ಪರಿಣಿತರನ್ನು ಆಯ್ಕೆ ಮಾಡಿ ಕೊಳ್ಳಲು ಕ್ರಮವಹಿಸಬೇಕು. ಮೈಸೂರು ವಿವಿಗೆ ಅಮೂಲ್ಯ ಸೇವೆ ಯನ್ನು ನೀಡಿ ನಿವೃತ್ತರಾದ ಪ್ರೊ.ಎಸ್.ಎಲ್.ಬೆಳಗಲಿ ಅವರ ಮುಂದಿನ ಜೀವನ ಸಂತೋಷವಾಗಿರಲಿ ಎಂದು ಹಾರೈಸಿದರು.
ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಬಿ.ಎಸ್.ಶೆರಿಗಾರ ಮಾತನಾಡಿ, ಮಂಗಳೂರು ವಿವಿಯಲ್ಲಿ ನಾನು ಮತ್ತು ಬೆಳಗಲಿ ಅವರು ಒಟ್ಟಿಗೆ ಹಲವು ವರ್ಷಗಳು ಕರ್ತವ್ಯ ನಿರ್ವಹಿಸಿದ್ದೇವೆ. ಬೆಳಗಲಿ ಉತ್ತಮ ವ್ಯಕ್ತಿತ್ವದವರು. ರಸಾಯನ ವಿಜ್ಞಾನದಿಂದ ವೃತ್ತಿ ಆರಂಭಿಸಿದ ಅವರು, ನಂತರ ಪರಿಸರ ವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದು ನಿಜಕ್ಕೂ ಅಚ್ಚರಿ ಮೂಡಿಸುವ ಸಂಗತಿ. ಎಂಥ ಕಠಿಣ ಪಾಠವನ್ನೂ ಸುಲಭವಾಗಿ ವಿಶ್ಲೇಷಿಸುತ್ತಿದ್ದರು ಎಂದು ಬಣ್ಣಿಸಿದರು.
ಮೈಸೂರು ವಿವಿ ದೇಶದಲ್ಲಿ ಅತ್ಯುತ್ತಮ ವಿಶ್ವವಿದ್ಯಾನಿಲಯ ವಾಗಿದೆ. ರಾಷ್ಟ್ರ ಮಟ್ಟದ ವಿವಿಯಾಗಿ ಬೆಳೆಯುತ್ತಿದೆ. ಮೈಸೂರು ವಿವಿಯಲ್ಲಿ ಪ್ರೊ.ಎಸ್.ಎಲ್.ಬೆಳಗಲಿ ಅವರಂತಹ ಪ್ರಾಧ್ಯಾಪಕ ರಿದ್ದು, ವಿವಿಯ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಬೆಳಗಲಿ ನಿಷ್ಠಾ ವಂತ ಶ್ರಮಜೀವಿಯಾಗಿದ್ದು, ಪರಿಸರಕ್ಕೆ ಸಂಬಂಧಿಸಿದಂತೆ ಹಲ ವಾರು ಸಂಶೋಧನೆಗಳನ್ನು ಮಾಡಿದ್ದಾರೆ ಎಂದರು. ಕಾರ್ಯ ಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್, ಕುಲಸಚಿವ ಪ್ರೊ.ಲಿಂಗರಾಜ ಗಾಂಧಿ, ಡಾ.ಎನ್.ಎಸ್.ರಾಜು, ಡಾ.ಎಸ್.ಶ್ರೀಕಂಠಸ್ವಾಮಿ, ಡಾ.ಜಿ.ವಿ.ವೆಂಕಟರಾಮಣ್ಣ, ಡಾ.ಕೆ.ಎಸ್. ಕುಮಾರ್, ಡಾ.ಡಿ.ಸಿ.ಶ್ಯಾಮಲ ಮತ್ತಿತರರು ಉಪಸ್ಥಿತರಿದ್ದರು.