ಮೋದಿ ವಿರುದ್ಧ ಜನ ಜಾಗೃತಿಗಾಗಿ ಅ.2ರಿಂದ ಕಾಂಗ್ರೆಸ್ `ಲೋಕ ಸಂಪರ್ಕ ಅಭಿಯಾನ’
ಮೈಸೂರು

ಮೋದಿ ವಿರುದ್ಧ ಜನ ಜಾಗೃತಿಗಾಗಿ ಅ.2ರಿಂದ ಕಾಂಗ್ರೆಸ್ `ಲೋಕ ಸಂಪರ್ಕ ಅಭಿಯಾನ’

September 26, 2018

ಮೈಸೂರು:  ಅ.2ರ ಗಾಂಧಿ ಜಯಂತಿ ದಿನದಿಂದ ನ.19ರವರೆಗೆ ಕಾಂಗ್ರೆಸ್‍ನಿಂದ `ಲೋಕ ಸಂಪರ್ಕ ಅಭಿಯಾನ’ ಹಮ್ಮಿಕೊಂಡಿದ್ದು, ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ತಿಳಿಸಿದರು.

ರಫೇಲ್ ಯುದ್ಧ ವಿಮಾನ ಖರೀದಿ ಸೇರಿದಂತೆ ಅನೇಕ ಭ್ರಷ್ಟಾಚಾರದಲ್ಲಿ ನರೇಂದ್ರ ಮೋದಿ ತೊಡಗಿದ್ದಾರೆ. ಜನರನ್ನು ಮರಳು ಮಾಡುತ್ತಿರುವ ಮೋದಿ, ಚುನಾವಣಾ ಪೂರ್ವದಲ್ಲಿ ಜನರಿಗೆ ನೀಡಿದ್ದ ಯಾವ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಈ ಬಗ್ಗೆ ಅಭಿಯಾನದಲ್ಲಿ ಮನೆ ಮನೆಗೆ ತೆರಳಿ ಜನಜಾಗೃತಿ ಮೂಡಿಸಲಾಗುವುದು ಎಂದು ಅವರು ಮಂಗಳವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅ.5ರಂದು ದೇಶಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.

ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಹೆಚ್.ವಿಜಯಕುಮಾರ್ ಮಾತನಾಡಿ, ಅಭಿಯಾನವನ್ನು ಪ್ರತಿ ಮನೆಗೂ ತಿಳಿಸುವ ಉದ್ದೇಶದಿಂದ ಪ್ರತಿ ಬೂತ್ ಮಟ್ಟದಲ್ಲಿ ರಚಿಸಲಾಗಿರುವ 30 ಜನರ ತಂಡ ಪ್ರತಿದಿನ ಮನೆ ಮನೆಗೆ ತೆರಳಿ ಕರಪತ್ರ ನೀಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಜಾಗೃತಿ ಉಂಟು ಮಾಡಲಿದೆ ಎಂದರು ಹೇಳಿದರು. ಸುದ್ದಿಗೋಷ್ಟಿಯಲ್ಲಿ ವಕೀಲ ಅರವಿಂದ್, ಮುಖಂಡರಾದ ರಾಜೇಶ್, ಸುನೀಲ್ ಉಪಸ್ಥಿತರಿದ್ದರು.

Translate »