ಮೈತ್ರಿ ಸರ್ಕಾರಕ್ಕೆ ಕಂಟಕಪ್ರಾಯವಾಗಿದ್ದ ಕಾಂಗ್ರೆಸ್ ಸಮಾನ ಮನಸ್ಕರ ಸಭೆ ರದ್ದು
ಮೈಸೂರು

ಮೈತ್ರಿ ಸರ್ಕಾರಕ್ಕೆ ಕಂಟಕಪ್ರಾಯವಾಗಿದ್ದ ಕಾಂಗ್ರೆಸ್ ಸಮಾನ ಮನಸ್ಕರ ಸಭೆ ರದ್ದು

April 30, 2019

ಬೆಂಗಳೂರು: ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಬಹಿರಂಗವಾಗಿ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದ ಮಹತ್ವದ ಕಾಂಗ್ರೆಸ್ ಸಮಾನ ಮನಸ್ಕರ ಸಭೆ ಹಠಾತ್ ರದ್ದಾಗಿದೆ.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸಭೆ ಕರೆದವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗುತ್ತಿದ್ದಂತೆ ಆಯೋಜಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಬಿಡಿಎ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‍ನ ಹಿರಿಯ ಶಾಸಕ ಎಸ್.ಟಿ. ಸೋಮಶೇಖರ್ ನಾಳೆ ಪಂಚತಾರಾ ಹೋಟೆಲ್‍ನಲ್ಲಿ ಸಮಾನ ಮನಸ್ಕರ ಸಭೆ ಕರೆದಿದ್ದರು. ಇದು ಮೈತ್ರಿ ಪಕ್ಷಕ್ಕೆ ಮತ್ತೊಂದು ಗಂಡಾಂತರ ಎಂದು ಹೇಳಲಾಗುತ್ತಿತ್ತು. ಆದರೆ ರಾಜ್ಯದಲ್ಲೇ ಬಿಡಾರ ಹೂಡಿರುವ ವೇಣುಗೋಪಾಲ್ ತಮಗೆ ಮಾಹಿತಿ ಬರುತ್ತಿದ್ದಂತೆ ಸೋಮಶೇಖರ್ ಅವರನ್ನು ಸಂಪರ್ಕಿಸಿ, ಸಭೆ ರದ್ದು ಮಾಡುವಂತೆ ತಾಕೀತು ಮಾಡಿದರು.

ಅಷ್ಟೇ ಅಲ್ಲ ನಿಮಗೆ ಸಭೆ ಕರೆಯುವ ಅಧಿಕಾರ ನೀಡಿರುವವರು ಯಾರು? ಎಂದು ಪ್ರಶ್ನಿಸಿರುವುದಲ್ಲದೆ, ನೀವು ಎಲ್ಲರಂತೆ ಪಕ್ಷದ ಒಬ್ಬ ವಿಧಾನಸಭಾ ಸದಸ್ಯರಷ್ಟೆ. ಪಕ್ಷದ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡರೆ ನಿಮ್ಮ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಯಾವುದೇ ಸಮಸ್ಯೆ ಇದ್ದರೂ ಸಿಎಲ್‍ಪಿ ನಾಯಕರು, ಉಪಮುಖ್ಯಮಂತ್ರಿ ಇಲ್ಲವೇ ರಾಜ್ಯಾಧ್ಯಕ್ಷರ ಬಳಿ ಚರ್ಚೆ ಮಾಡಿ, ಬಗೆಹರಿಸಿಕೊಳ್ಳಬೇಕು. ನೀವೇನು ಶಾಸಕಾಂಗ ಪಕ್ಷದ ನಾಯಕರೇ? ಎಂದು ಪ್ರಶ್ನಿಸಿದ್ದರು. ಎಚ್ಚರಿಕೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಸೋಮಶೇಖರ್ ನಾಳಿನ ಸಮಾನ ಮನಸ್ಕರ ಸಭೆ ಮುಂದೂಡಿದ್ದೇವೆ ಎಂದು ತಿಳಿಸಿದ್ದರೂ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದಲ್ಲೇ ಗುರುತಿಸಿಕೊಂಡಿರುವ ಸೋಮಶೇಖರ್, ಮುಖ್ಯಮಂತ್ರಿ ವಿರುದ್ಧ ಮಾಡಿರುವ ಟೀಕೆ ಅವರ ಕೋಪತಾಪಗಳನ್ನು ಎತ್ತಿ ತೋರಿಸುತ್ತದೆ.

ಸಿಎಂ ಸಮುದ್ರದಲ್ಲಿ ಈಜಾಡುತ್ತಾ, ಮೈಮೇಲೆ ಮರಳು ಎರಚಿಕೊಂಡು ಆರಾಮಾಗಿದ್ದಾರೆ…
ಬೆಂಗಳೂರು:ಮುಖ್ಯಮಂತ್ರಿಯವರು ಆರಾಮಾಗಿ ರೆಸಾರ್ಟ್‍ನಲ್ಲಿ ವಾಸ್ತವ್ಯ ಮಾಡಲಿ. ತಮಗಿರುವ ಒತ್ತಡ ಕಡಿಮೆ ಮಾಡಿಕೊಳ್ಳಲು ವಿಶ್ರಾಂತಿಗೆ ತೆರಳಿರುವ ಅವರಿಗೆ ಮತ್ತಷ್ಟು ಒತ್ತಡ ತರಬಾರದು ಎಂದು ಸಭೆ ರದ್ದು ಮಾಡಿದ್ದೇನೆ ಎಂದು ಸಮಾನ ಮನಸ್ಕರ ಸಭೆ ಕರೆದಿದ್ದ ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಾಪ, ಅವರು ಸಮುದ್ರದಲ್ಲಿ ಈಜಾಡಿಕೊಂಡು ಕೂತಿದ್ದಾರೆ. ಮೈಮೇಲೆ ಮರಳು ಹಾಕಿ ಕೊಂಡು ಆರಾಮ ಆಗಿರುವುದನ್ನು ನೀವೇ ತೋರಿಸುತ್ತಿದ್ದೀರಿ. ರಾಜ್ಯದಲ್ಲಿ ಬರ ತಾಂಡವವಾಡು ತ್ತಿದೆ. ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದೆ. ಜನರಿಗೆ ಹಳ್ಳಿಯಲ್ಲಿ ಕುಡಿಯುವ ನೀರೇ ದೊರೆಯುತ್ತಿಲ್ಲ. ಆದರೆ ನಮ್ಮ ನಾಯಕರು ಸಮುದ್ರದ ದಡದಲ್ಲಿ ಮೈಮೇಲೆ ಮರಳು ಹಾಕಿಕೊಂಡು ಕುಳಿತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. ನಾನೇನು ಬ್ಲಾಕ್‍ಮೇಲ್ ಮಾಡಲು ಸಮಾನ ಮನಸ್ಕರ ಸಭೆ ಕರೆದಿರಲಿಲ್ಲ. ನಮ್ಮ ಮುಂದೆ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ಚರ್ಚೆ ಮಾಡಿ, ನಮ್ಮ ನಾಯಕರ ಗಮನಕ್ಕೆ ತರಬೇಕೆಂಬ ಉದ್ದೇಶದಿಂದ ಸಭೆ ಕರೆಯಲಾಗಿತ್ತು ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಕುಂದಗೋಳ ಮತ್ತು ಚಿಂಚೊಳ್ಳಿ ವಿಧಾನಸಭೆಗೆ ಉಪಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಾಸಕರಿಗೆ ಚುನಾವಣೆ ಉಸ್ತುವಾರಿ ನೀಡಲಾಗಿದೆ. ನಾಮಪತ್ರ ಸಲ್ಲಿಕೆಗೆ ಇಂದೇ ಕಡೇ ದಿನವಾಗಿರುವುದರಿಂದ ನಾಮಪತ್ರ ಸಲ್ಲಿಸುವ ವೇಳೆ ಶಾಸಕರಿಗೆ ಕಡ್ಡಾಯವಾಗಿ ಹಾಜರಿರುವಂತೆ ಹೈಕಮಾಂಡ್ ಸೂಚನೆ ನೀಡಿದೆ. ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಸಭೆ ಮುಂದೂಡಿದ್ದೇನೆ ಎಂದಿದ್ದಾರೆ.

ಪ್ರಸ್ತುತ ಮೈತ್ರಿ ಸರ್ಕಾರದಲ್ಲಿ ಈಗಾಗಲೇ ಸಾಕಷ್ಟು ಭಿನ್ನರಾಗಗಳು ಕೇಳಿಬರುತ್ತಿರುವ ನಡುವೆ ಸೋಮಶೇಖರ್ ಅವರ ಈ ಪತ್ರ ಮತ್ತಷ್ಟು ಆಂತರಿಕ ಕಲಹಕ್ಕೆ ವೇದಿಕೆ ಮಾಡಿಕೊಟ್ಟಿತ್ತು. ಇದು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಂದಿಯಾಗಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿತ್ತು.

ಸೋಮಶೇಖರ್ ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದರು. ಈ ಸಭೆಯಲ್ಲಿ ಪಾಲ್ಗೊಳ್ಳಬಹುದು ಎಂದು ನಿರೀಕ್ಷಿಸಲಾಗಿದ್ದ ಬೈರತಿ ಬಸವರಾಜ್, ಮುನಿರತ್ನ, ಬೈರತಿ ಸುರೇಶ್ ಎಲ್ಲರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು, ಆಪ್ತ ವಲಯದಲ್ಲಿ ಗುರುತಿಸಿಕೊಂಡವರು. ರಾಜ್ಯದಲ್ಲಿ “ಕೆಟ್ಟ ರಾಜಕೀಯ ಪರಿಸ್ಥಿತಿ” ಕುರಿತು ಚರ್ಚಿಸಲು ಸಭೆಗೆ ಆಹ್ವಾನಿಸಿದ್ದರು.ಈ ಕುರಿತಂತೆ ಅವರು ಬರೆದ ಪತ್ರ ಮೈತ್ರಿ ಪಾಲುದಾರರ ನಡುವೆ ಎಲ್ಲವೂ ಚೆನ್ನಾಗಿಲ್ಲ ಎಂಬುದನ್ನು ಎತ್ತಿ ತೋರಿಸಿತ್ತು.

“ಕರ್ನಾಟಕದಲ್ಲಿ ಪ್ರಸ್ತುತ ರಾಜಕೀಯ ಸನ್ನಿವೇಶವು ಕೆಟ್ಟ ಸ್ಥಿತಿಯಲ್ಲಿದೆ. ಆದ್ದರಿಂದ ನಾವು ಇಷ್ಟಪಡುವ ಶಾಸಕರು ಒಟ್ಟಾಗಿ ಸೇರಲು ಮತ್ತು ಪ್ರಸ್ತುತ ನಡೆಯುತ್ತಿರುವ ಸನ್ನಿವೇಶವನ್ನು ಚರ್ಚಿಸಲು, ಪರಿಹಾರವನ್ನು ಕಂಡುಹಿಡಿಯಲು ಮಂಗಳವಾರ, ಸಭೆಗೆ ಬರುವುದು” ಎಂದು ಸೋಮಶೇಖರ್ ಪತ್ರ ಬರೆದಿದ್ದರು.

Translate »