ಬೇಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ಮತಯಾಚನೆ
ಹಾಸನ

ಬೇಲೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ಮತಯಾಚನೆ

April 30, 2018

ಬೇಲೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೀರ್ತನ ರುದ್ರೇಶ ಗೌಡ ಅವರಿಂದು ಮತಯಾಚನೆಗೆ ತೆರಳಿದ ಸಂದರ್ಭ ಪುರಸಭಾ ನಾಮಿನಿ ಸದಸ್ಯರೊಬ್ಬರು ತರಾಟೆ ತೆಗೆದು ಕೊಂಡ ಘಟನೆ ಜರುಗಿತು.

ಪಟ್ಟಣದ ಹೆಚ್.ಕೆ.ಕುಮಾರಸ್ವಾಮಿ ಬಡಾವಣೆಯಲ್ಲಿ ಕೀರ್ತನ ಅವರು ಮತಯಾಚಿಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಪುರಸಭಾ ನಾಮಿನಿ ಸದಸ್ಯ ವೆಂಕಟೇಶ್ ಅವರನ್ನು ಪ್ರಚಾರಕ್ಕೆ ಬರುವಂತೆ ಕಾಂಗ್ರೆಸ್ ಮುಖಂಡರು ಕೋರಿದರು. ಈ ಸಂದರ್ಭ ಬೇಸರಗೊಂಡ ಸದಸ್ಯ ವೆಂಕಟೇಶ್, ಕಳೆದ ಚುನಾವಣೆ ವೇಳೆ ಈ ವಾರ್ಡಿಗೆ ಪ್ರಚಾರಕ್ಕೆ ಆಗಮಿಸಿದ ವೈ.ಎನ್. ರುದ್ರೇಶಗೌಡರು ಗಣಪತಿ ದೇವಾಲಯ ನಿರ್ಮಿಸಲು ಆರ್ಥಿಕ ನೆರವು ಮತ್ತು ಯಗಚಿ ನಾಲೆ ಮುಳುಗq ವಸತಿ ರಹಿತರಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೆ ಈ ಎರಡನ್ನೂ ಈಡೇರಿ ಸಿಲ್ಲ. ಕಳೆದ ಚುನಾವಣೆ ಪ್ರಚಾರದ ವೇಳೆ ನಾನು ಇಲ್ಲಿನ ಜನರಿಗೆ ದೇವಾಲಯ ಹಾಗೂ ನಿವೇಶನ ಕೊಡಿಸುವ ಭರವಸೆ ನೀಡಿ ಮತಯಾಚಿಸಿದ್ದೆ. ಆಗ ನಿರೀಕ್ಷೆಗೂ ಹೆಚ್ಚು ಮತಗಳು ಬಂದಿದ್ದವು. ಆದರೆ ಈವರೆಗೆ ಕೊಟ್ಟ ಭರವಸೆ ಈಡೇರಿಸದ ಕಾರಣ ನಾನು ಹೇಗೆ ತಾನೇ ಪ್ರಚಾರಕ್ಕೆ ಬರಲಿ? ಬಂದರೆ ನನ್ನ ಜನ ನನ್ನನ್ನು ತರಾಟೆ ತೆಗೆದುಕೊಳ್ಳುತ್ತಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ವೇಳೆ ಮತಯಾಚಿಸಲು ಅಭ್ಯರ್ಥಿ ಜೊತೆಗೆ ಬಂದಿದ್ದ ಗ್ರಾಪಂ ಸದಸ್ಯ ಶಂಭುಗನಹಳ್ಳಿ ಬಾಬು, ಇತರರು ಸಮಾಧಾನ ಪಡಿಸಿ ಪ್ರಚಾರ ಮುಂದುವರೆಸಿದರು.

ಬೇಲೂರು: ವಿಧಾನ ಸಭಾ ಕಾಂಗ್ರೆಸ್ ಅಭ್ಯರ್ಥಿ ಕಿರ್ತನಾ ಪಟ್ಟಣದ ವಿವಿಧ ವಾರ್ಡ್‍ಗಳಲ್ಲಿ ಪ್ರಚಾರ ಕೈಗೊಂಡು ಮತಯಾಚಿಸಿದರು.

ಪಟ್ಟಣದ 1ನೇ ವಾರ್ಡ್ ಹೊಸನಗರ ಬಡಾವಣೆ ಯಲ್ಲಿ ಮತಯಾಚಿಸಿ ಮಾತನಾಡಿದ ಅವರು, ನನಗೆ ಚುನಾವಣೆ ಹೊಸದಾದರೂ ನಮ್ಮ ಪತಿ ವೈ.ಎನ್. ರುದ್ರೇಶಗೌಡರು ಕಳೆದ 34 ವರ್ಷಗಳ ರಾಜಕೀಯ ಅನುಭವ ನೋಡಿದ್ದೇನೆ. ಜನಗಳ ಕಷ್ಟಗಳನ್ನು ತಿಳಿದು ಅವರಂತೆ ಸೇವೆ ಮಾಡಬೇಕೆಂದು ಈ ಕ್ಷೇತ್ರಕ್ಕೆ ಬಂದಿದ್ದು ಮತದಾರರು ಆಶೀರ್ವದಿಸಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಜಿಪಂ ಮಾಜಿ ಸದಸ್ಯ ವೈ.ಎನ್.ಕೃಷ್ಣಕುಮಾರ್ ಮಾತನಾಡಿ, ಬೇಲೂರು ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕ ವೈ.ಎನ್.ರುದ್ರೇಶಗೌಡರು ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಬೇಲೂರು ಪಟ್ಟಣಕ್ಕೆ ಸುಮಾರು 16 ಕೊಟಿ ರೂ. ವೆಚ್ಚದಲ್ಲಿ ಎಕ್ಸ್‍ಪ್ರೆಸ್ ಕುಡಿಯುವ ನೀರಿನ ಯೋಜನೆ ರೂಪಿಸಿರುವುದು ಹೆಮ್ಮೆಯ ವಿಚಾರ ಎಂದರು. ಬಿ.ಎಲ್.ಧರ್ಮೇಗೌಡ, ಅಬ್ದುಲ್‍ಸಮದ್, ಅಕ್ರಂ, ಆಶೋಕ್, ಇಕ್ಬಾಲ್, ಸಲೀಂ, ಬಷೀರ್, ಅತ್ತು, ಸುರೇಶ್ ಸೇರಿದಂತೆ ನೂರಾರು ಬೆಂಬಲಿಗರಿದ್ದರು.

Translate »