ಬಿಜೆಪಿಯಿಂದ ಆಮಿಷ: ಬೆಂಗಳೂರು ಪೊಲೀಸ್ ಕಮೀಷ್ನರ್‍ಗೆ ಕಾಂಗ್ರೆಸ್ ದೂರು
ಮೈಸೂರು

ಬಿಜೆಪಿಯಿಂದ ಆಮಿಷ: ಬೆಂಗಳೂರು ಪೊಲೀಸ್ ಕಮೀಷ್ನರ್‍ಗೆ ಕಾಂಗ್ರೆಸ್ ದೂರು

December 5, 2018

ಬೆಂಗಳೂರು, ಡಿ.4-ಆಪರೇಷನ್ ಕಮಲಕ್ಕೆ ಮತ್ತೆ ಮುಂದಾಗಿದ್ದಾರೆ ಎಂದು ಆರೋಪಿಸಿ ಗಣಿಧಣಿ ಜನಾರ್ಧನ ರೆಡ್ಡಿ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಹಾಗೂ ಶಾಸಕ ಶ್ರೀ ರಾಮುಲು ಸೇರಿದಂತೆ ಹಲವು ಬಿಜೆಪಿ ನಾಯಕರ ವಿರುದ್ಧ ರಾಜ್ಯ ಕಾಂಗ್ರೆಸ್ ಮುಖಂಡರು ಬೆಂಗಳೂರು ನಗರ ಪೊಲೀಸ್ ಕಮೀಷ್ನರ್‍ಗೆ ದೂರು ನೀಡಿದ್ದಾರೆ.

ಇತ್ತೀಚೆಗೆ ಬಯಲಾಗಿರುವ ಆಡಿಯೋ ದಲ್ಲಿ ಆಪರೇಷನ್ ಕಮಲ ಸಂಬಂಧ ಶಾಸಕ ಶ್ರೀರಾಮುಲು ಆಪ್ತ ಸಹಾಯಕ ಮಂಜು ಎಂಬುವರು ದುಬೈ ಉದ್ಯಮಿ ಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಆಡಿಯೋ ದಲ್ಲಿ ಬಿಜೆಪಿಗೆ ಸೇರ್ಪಡೆಯಾಗುವ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ದೊಂದಿಗೆ 25 ಕೋಟಿ ರೂ. ನಗದು ನೀಡುವ ಆಮಿಷ ಒಡ್ಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದು ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಕೃತ್ಯವಾಗಿದೆ. ಮೈತ್ರಿ ಸರ್ಕಾರ ವನ್ನು ಪತನಗೊಳಿಸುವ ಪ್ರಯತ್ನವೂ ಆಗಿದೆ. ಈ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ ವಾಸ್ತವ ಸಂಗತಿಯನ್ನು ರಾಜ್ಯದ ಜನರ ಮುಂದೆ ಇಡುವಂತೆ ಪೊಲೀಸ್ ಕಮೀಷ್ನರ್‍ಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಹರ್ಷದ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Translate »