ಶಾಸಕ ವಿಶ್ವನಾಥ್‍ರ ಉದ್ಧಟತನಕ್ಕೆ ಕಾಂಗ್ರೆಸ್ ಖಂಡನೆ
ಮೈಸೂರು

ಶಾಸಕ ವಿಶ್ವನಾಥ್‍ರ ಉದ್ಧಟತನಕ್ಕೆ ಕಾಂಗ್ರೆಸ್ ಖಂಡನೆ

July 1, 2018

ಮೈಸೂರು: ಇತ್ತೀಚೆಗೆ ಹುಣಸೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಡಗೂರು ಎಚ್. ವಿಶ್ವನಾಥ್ ಅವರು ಕಾಂಗ್ರೆಸ್‍ನ ಮಹಿಳಾ ಜನಪ್ರತಿನಿಧಿಗಳೊಂದಿಗೆ ಉದ್ಧಟತನದಿಂದ ವರ್ತಿಸಿರುವುದಲ್ಲದೆ, ತಮ್ಮ ವಿರುದ್ಧ ಕೆಲವರು ರಾಜಕೀಯ ತೀಟೆ ಮಾಡುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಅವರ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರರಾದ ಹೆಚ್. ತೇಜಸ್ವಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವನಾಥ್ ಅವರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ತೀಟೆ ರಾಜಕಾರಣವನ್ನೇ ಮಾಡುತ್ತಾ ಬಂದಿದ್ದು, ಇನ್ನೊಬ್ಬರಿಗೆ ತೀಟೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ತಮ್ಮ ಹರಕು ಬಾಯಿಯಿಂದಲೇ ರಾಜಕೀಯ ಅಧಃಪತನಕ್ಕೆ ಇಳಿದಿದ್ದ ವಿಶ್ವನಾಥ್, ತಮ್ಮ ರಾಜಕೀಯದ ಉದ್ದಕ್ಕೂ ಒಕ್ಕಲಿಗ ಮಠ ಮತ್ತು ನಾಯಕರ ವಿರುದ್ಧ ತೀಟೆ ತೆಗೆಯುತ್ತಲೇ ಬಂದಿರುವುದು ಇಡೀ ಕರ್ನಾಟಕಕ್ಕೆ ಗೊತ್ತಿದೆ.

ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಕ್ಯಾಬಿನೆಟ್ ಮಂತ್ರಿಯಾಗಿದ್ದ ವಿಶ್ವನಾಥ್, ಒಕ್ಕಲಿಗ ಮಠಕ್ಕೆ ಭೂಮಿ ಕೊಡುವ ವಿಷಯದಲ್ಲಿ ತೀಟೆ ತೆಗೆದಿದ್ದರು. ತಾವು ಬರೆದ ಹಳ್ಳಿ ಹಕ್ಕಿ ಹಾಡಿನ ಕೃತಿಯಲ್ಲಿ ಎಸ್.ಎಂ. ಕೃಷ್ಣ ಅವರ ಖಾಸಗಿ ವಿಷಯವನ್ನು ಪ್ರಸ್ತಾಪಿಸಿ ತೀಟೆ ಮಾಡಿದ್ದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಕುಟುಂಬದ ವಿರುದ್ಧ ಸದಾ ತೀಟೆ ಮಾಡುತ್ತಲೇ ಬಂದಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡೇ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ತೀಟೆ ಮಾಡಿ ಮಾಜಿ ಪ್ರಧಾನಿ ದೇವೇಗೌಡರನ್ನು ಓಲೈಸಿಕೊಂಡರು ಎಂದು ಹೇಳಿದ್ದಾರೆ.

Translate »