ಮೈಸೂರು: ಯೋಗವನ್ನು ‘ಕ್ರೀಡೆ’ ಎಂದು ಪರಿಗಣಿಸಿ ಆದ್ಯತಾ ವಲಯ ದಲ್ಲಿ ಗುರುತಿಸುವಂತೆ ಕೋರಿ ಯೋಗಾಸನ ಪ್ರಿಯರೂ ಆದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಂತಾರಾಷ್ಟ್ರೀಯ ಯೋಗ ಪ್ರತಿಭೆ, ಮೈಸೂರಿನ ಬಾಲಕಿ ಖುಷಿ ಮನವಿ ಪತ್ರ ಸಲ್ಲಿಸಿದ್ದಾಳೆ.
ಕಳೆದ ಡಿ. 31ರಂದು ನವದೆಹಲಿಯಲ್ಲಿ ಪ್ರಧಾನಿಯವರನ್ನು ಸಂಸದ ಪ್ರತಾಪ್ ಸಿಂಹ ಅವರ ಜೊತೆಗೂಡಿ ಭೇಟಿ ಮಾಡಿದ ಖುಷಿ, ಇತರೆ ಕ್ರೀಡೆಗಳಿಗೆ ಸವಲತ್ತುಗಳನ್ನು ನೀಡುವಂತೆಯೇ ‘ಯೋಗ’ಕ್ಕೂ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಒದಗಿಸಲಿ ಎಂದು ಮನವಿ ಮಾಡಿದಳು.
ಮೈಸೂರಿನ ಸೇಂಟ್ ಜೋಸೆಫ್ ಕೇಂದ್ರೀಯ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾದ ಈಕೆ, ಯೋಗ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಹಳಷ್ಟು ಪ್ರಶಸ್ತಿ ಗಳಿಸಿದ್ದಾಳೆ. ಮೈಸೂರಿನ ಸ್ವಚ್ಛ ಭಾರತ ಅಭಿಯಾನದ ಪ್ರಚಾರ ರಾಯಭಾರಿಯೂ ಆಗಿದ್ದಾಳೆ.